Asianet Suvarna News Asianet Suvarna News

ICC U-19 World Cup: ಗೆಲುವಿನೊಂದಿಗೆ ಶುಭಾರಂಭ ಮಾಡಿದ ಭಾರತ

* ಅಂಡರ್ 19 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಭಾರತ

* ದಕ್ಷಿಣ ಆಫ್ರಿಕಾ ಎದುರು ಮೊದಲ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ

* ಬಹುತೇಕ ಕ್ವಾರ್ಟರ್ ಫೈನಲ್ ಹಾದಿ ಸುಗಮಗೊಳಿಸಿಕೊಂಡ ಭಾರತ

ICC U 19 World Cup Vicky Ostwal Fifer Helps India Win against South Africa in First Match kvn
Author
Bengaluru, First Published Jan 17, 2022, 10:28 AM IST

ಜಾಜ್‌ರ್‍ಟೌನ್‌: 14ನೇ ಆವೃತ್ತಿಯ ಐಸಿಸಿ ಅಂಡರ್‌-19 ಏಕದಿನ ವಿಶ್ವಕಪ್‌ನಲ್ಲಿ (ICC U-19 World Cup) ನಾಲ್ಕು ಬಾರಿಯ ಚಾಂಪಿಯನ್‌ ಭಾರತ ಶುಭಾರಂಭ ಮಾಡಿದೆ. ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ 45 ರನ್‌ ಗೆಲುವು ಸಾಧಿಸಿತು. ಎಡಗೈ ಸ್ಪಿನ್ನರ್‌ ವಿಕ್ಕಿ ಓಸ್ತ್ವಾಲ್‌ (Vicky Ostwal) ಭರ್ಜರಿಯಾಗಿ 5 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜತೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಭಾರತ ನೀಡಿದ್ದ 233 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 187 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಮುಖಭಂಗ ಅನುಭವಿಸಿತು. 

ಮೊದಲು ಬ್ಯಾಟ್‌ ಮಾಡಿದ ಭಾರತ 46.5 ಓವರ್‌ಗಳಲ್ಲಿ 232 ರನ್‌ಗೆ ಆಲೌಟಾಯಿತು. ಕಠಿಣ ಗುರಿ ಬೆನ್ನತ್ತಿದ ದ.ಆಫ್ರಿಕಾ 45.4 ಓವರ್‌ಗಳಲ್ಲಿ 187 ರನ್‌ ಗಳಿಸಿತು. ಡೆವಾಲ್ಡ್‌ ಬ್ರೆವಿಸ್‌ 65, ನಾಯಕ ಜಾಜ್‌ರ್‍ ವ್ಯಾನ್‌ 36 ರನ್‌ ಗಳಿಸಿದರು. 10 ಓವರಲ್ಲಿ 28 ರನ್‌ ನೀಡಿ ಎಡಗೈ ಸ್ಪಿನ್ನರ್‌ ವಿಕ್ಕಿ ಓಸ್ತ್ವಾಲ್‌ 5 ವಿಕೆಟ್‌ ಕಿತ್ತರೆ, ರಾಜ್‌ ಬಾವಾ 47 ರನ್‌ಗೆ 4 ವಿಕೆಟ್‌ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಾಯಕ ಯಶ್‌ ಆಸರೆ: ಇದಕ್ಕೂ ಮೊದಲು ಆರಂಭಿಕ ಆಘಾತ ಅನುಭವಿಸಿದ್ದ ಭಾರತಕ್ಕೆ ನಾಯಕ ಯಶ್‌ ಧುಳ್‌ (Yash Dhull) ಆಸರೆಯಾದರು. 11 ರನ್‌ಗೆ 2 ವಿಕೆಟ್‌ ಕಳೆದುಕೊಂಡಾಗ ಶೇಖ್‌ ರಶೀದ್‌(31) ಜೊತೆ ಯಶ್‌ 71 ರನ್‌ ಜೊತೆಯಾಟವಾಡಿದರು. ಕೌಶಲ್‌ ತಾಂಬೆ(35) ನಿಶಾಂತ್‌ ಸಿಂಧು(27) ನಾಯಕನಿಗೆ ಉತ್ತಮ ಬೆಂಬಲ ನೀಡಿದರು. 100 ಎಸೆತಗಳಲ್ಲಿ 82 ರನ್‌ ಸಿಡಿಸಿದ ಯಶ್‌ 39ನೇ ಓವರಲ್ಲಿ ರನೌಟಾಗಿ ನಿರ್ಗಮಿಸಿದರು.

IPL 2022: ಕೆಕೆಆರ್ ತಂಡದ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ನೇಮಕ..!

ಭಾರತದ ಕ್ವಾರ್ಟರ್ ಫೈನಲ್ ಹಾದಿ ಬಹುತೇಕ ಸುಗಮ: ಯಶ್‌ ಧುಳ್ ನೇತೃತ್ವದ ಭಾರತ ಕಿರಿಯರ ಕ್ರಿಕೆಟ್ ತಂಡವು ಇದೀಗ ಹರಿಣಗಳ ವಿರುದ್ದ ಗೆಲುವು ಸಾಧಿಸುವ ಮೂಲಕ ತನ್ನ ಕ್ವಾರ್ಟರ್‌ ಫೈನಲ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಅಂಡರ್ 19 ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕಿರಿಯರ ತಂಡವು 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತ ತನ್ನ ಮುಂದಿನ ಪಂದ್ಯದಲ್ಲಿ ಕ್ರಿಕೆಟ್ ಶಿಶುಗಳಾದ ಐರ್ಲೆಂಡ್ ಹಾಗೂ ಉಗಾಂಡ ತಂಡವನ್ನು ಎದುರಿಸಲಿದೆ. ಏಷ್ಯಾಕಪ್‌ನಲ್ಲಿ ಚಾಂಪಿಯನ್‌ ಆದ ಬಳಿಕ ದುಬೈನಿಂದ ನೇರವಾಗಿ ವೆಸ್ಟ್‌ಇಂಡೀಸ್‌ಗೆ ತಲುಪಿದ ಭಾರತ, ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ. ಕಳೆದ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ ಕಿರಿಯರ ತಂಡವು ಇದೀಗ ಐದನೇ ಟ್ರೋಫಿ ಮೇಲೆ ಚಿತ್ತ ನೆಟ್ಟಿದೆ.

ಸ್ಕೋರ್‌: 
ಭಾರತ 46.5 ಓವರಲ್ಲಿ 232/10
(ಯಶ್‌ 82, ತಾಂಬೆ 35, ಬೋಸ್ಟ್‌ 3-40) 

ದಕ್ಷಿಣ ಆಫ್ರಿಕಾ 45.4 ಓವರಲ್ಲಿ 187/10 
(ಬ್ರೆವಿಸ್‌ 65, ವಿಕ್ಕಿ ಓಸ್ತ್ವಾಲ್‌ 5-28, ರಾಜ್‌ 4-47)

ಪಂದ್ಯಶ್ರೇಷ್ಠ: ವಿಕ್ಕಿ ಓಸ್ತ್ವಾಲ್‌

ಯುಎಇ, ಐರ್ಲೆಂಡ್‌, ಜಿಂಬಾಬ್ವೆಗೆ ಜಯ

ಶನಿವಾರ ಇತರೆ ಮೂರು ಪಂದ್ಯಗಳಲ್ಲಿ ಯುಎಇ, ಐರ್ಲೆಂಡ್‌ ಹಾಗೂ ಜಿಂಬಾಬ್ವೆ ತಂಡಗಳು ಜಯ ಸಾಧಿಸಿವೆ. ಉಗಾಂಡ ವಿರುದ್ಧ ಐರ್ಲೆಂಡ್‌ 39 ರನ್‌ಗಳಿಂದ ಗೆದ್ದರೆ, ಪಪುವಾ ನ್ಯೂಗಿನಿ ವಿರುದ್ಧ ಜಿಂಬಾಬ್ವೆ 228 ರನ್‌ ಭರ್ಜರಿ ಜಯ ಸಾಧಿಸಿತು. ಕೆನಡಾ ವಿರುದ್ಧದ ಪಂದ್ಯದಲ್ಲಿ ಯುಎಇ 49 ರನ್‌ಗಳ ಗೆಲುವು ಸಾಧಿಸಿತು.

Follow Us:
Download App:
  • android
  • ios