* ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಐಸಿಸಿ* 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಜನವರಿ 21ರಂದು ಪ್ರಕಟ* ಟಿ20 ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗೂ ನಡೆಯಲಿದೆ

ದುಬೈ(ಡಿ.08): ಮುಂದಿನ ವರ್ಷದ ಕೊನೆಯಲ್ಲಿ ಆಸ್ಪ್ರೇಲಿಯಾದಲ್ಲಿ (Australia) ಆರಂಭವಾಗಲಿರುವ 8ನೇ ಆವೃತ್ತಿಯ ಟಿ20 ವಿಶ್ವಕಪ್‌ನ (ICC T20 World Cup) ವೇಳಾಪಟ್ಟಿಯನ್ನು ಐಸಿಸಿ ಜನವರಿ 21ಕ್ಕೆ ಪ್ರಕಟಿಸಲಿದೆ. ‘2022ರ ಟಿ20 ವಿಶ್ವಕಪ್‌ಗೆ 11 ತಿಂಗಳು ಬಾಕಿ ಇದೆ. ಜನವರಿ 21ಕ್ಕೆ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದೇವೆ. ಫೆಬ್ರವರಿ 7ಕ್ಕೂ ಮೊದಲು ಪಂದ್ಯಾವಳಿಯ ಟಿಕೆಟ್‌ಗಳು ಮಾರಾಟಕ್ಕೆ ಲಭ್ಯವಿರಲಿದೆ’ ಎಂದು ಐಸಿಸಿ ಮಾಹಿತಿ ನೀಡಿದೆ.

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗೂ ಅಡಿಲೇಡ್‌, ಬ್ರಿಸ್ಬೇನ್‌ ಸೇರಿದಂತೆ ಆಸ್ಪ್ರೇಲಿಯಾದ 7 ನಗರಗಳಲ್ಲಿ ನಡೆಯಲಿವೆ. ಫೈನಲ್‌ ಪಂದ್ಯ ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ ನವೆಂಬರ್ 13ಕ್ಕೆ ನಿಗದಿಯಾಗಿದೆ. 2022ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯುಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿದ್ದು, ಅಡಿಲೇಡ್‌, ಬ್ರಿಸ್ಬೇನ್‌, ಗೀಲಾಂಗ್‌, ಹೋಬರ್ಟ್‌, ಮೆಲ್ಬೊರ್ನ್‌, ಪರ್ತ್ ಹಾಗೂ ಸಿಡ್ನಿಯಲ್ಲಿ ಪಂದ್ಯಗಳು ನಡೆಯಲಿವೆ.

2022ರ ಪುರುಷರ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿ ಆರಂಭಕ್ಕೆ ಇನ್ನೂ ಕೇವಲ 11 ತಿಂಗಳು ಬಾಕಿ ಇವೆ. ಟೂರ್ನಿಗೆ ಅಭಿಮಾನಿಗಳು ಸಜ್ಜಾಗುವ ಉದ್ದೇಶದಿಂದ ಜನವರಿ 21, 2022ರಂದು ಟಿ20 ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದೇವೆ ಎಂದು ಐಸಿಸಿ (ICC) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ನವೆಂಬರ್‌ನಲ್ಲೇ ಐಸಿಸಿಯು 2022ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನೇರ ಅರ್ಹತೆಗಿಟ್ಟಿಸಿಕೊಂಡ 8 ತಂಡಗಳನ್ನು ಹೆಸರಿಸಿತ್ತು. ಅದರಂತೆ ಆತಿಥೇಯ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ರನ್ನರ್ ಅಪ್‌ ನ್ಯೂಜಿಲೆಂಡ್, ಆಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ನೇರ ಅರ್ಹತೆಯನ್ನು ಗಿಟ್ಟಿಸಿಕೊಂಡಿತ್ತು. ಇದರ ಜತೆಗೆ ಅರ್ಹತಾ ಸುತ್ತಿನಲ್ಲಿ ವಿಜೇತರಾದ 4 ತಂಡಗಳು ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯಲಿವೆ.

ICC player of the month: ಡೇವಿಡ್ ವಾರ್ನರ್‌, ಟಿಮ್ ಸೌಥಿ ಸೇರಿ ಮೂವರ ಹೆಸರು ಶಿಫಾರಸು..!

ಅಚ್ಚರಿ ಎಂಬಂತೆ 2 ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್‌ ವೆಸ್ಟ್‌ ಇಂಡೀಸ್ ತಂಡವು ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನೇರ ಅರ್ಹತೆಗಿಟ್ಟಿಸಿಕೊಳ್ಲಲು ವಿಫಲವಾಗಿದೆ. ನಮೀಬಿಯಾ, ಸ್ಕಾಟ್ಲೆಂಡ್, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ರೌಂಡ್‌ 1ರಲ್ಲಿ ಸ್ಥಾನ ಪಡೆದಿವೆ. 

ಆರ್‌ಸಿಬಿಗೆ ಎಬಿಡಿ ಬ್ಯಾಟಿಂಗ್‌ ಕೋಚ್‌?

ಬೆಂಗಳೂರು: ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದ ಎಬಿ ಡಿ ವಿಲಿಯ​ರ್ಸ್‌ (AB de Villiers), ಆರ್‌ಸಿಬಿ (RCB) ತಂಡದಲ್ಲಿ ಮತ್ತೆ ಕಾಣಿಸಿಕೊಳ್ಳುವ ನಿರೀಕ್ಷೆ ಶುರುವಾಗಿದೆ. 

2022ರ ಐಪಿಎಲ್‌ಗೆ ಎಬಿಡಿ ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ನೇಮಕಗೊಳ್ಳುವ ಸಾಧ್ಯತೆ ಇದ್ದು, ಈ ಬಗ್ಗೆ ಹೊಸದಾಗಿ ಪ್ರಧಾನ ಕೋಚ್‌ ಹುದ್ದೆಗೇರಿರುವ ಸಂಜಯ್‌ ಬಾಂಗರ್‌ ಸುಳಿವು ನೀಡಿದ್ದಾರೆ. ಬಾಂಗರ್‌, ವಿಲಿಯ​ರ್ಸ್‌ ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ನೇಮಕಗೊಂಡರೆ ಆಟಗಾರರಿಗೆ ಹಾಗೂ ಫ್ರಾಂಚೈಸಿಗೆ ಅನುಕೂಲವಾಗಲಿದೆ ಎನ್ನುವ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದ್ದಾರೆ.

ಪ್ರೊ ಕಬಡ್ಡಿ ಪ್ರಚಾರ ವಿಡಿಯೋದಲ್ಲಿ ಧೋನಿ

ಬೆಂಗಳೂರು: ಡಿಸೆಂಬರ್ 22ರಂದು ಆರಂಭವಾಗಲಿರುವ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ (Pro Kabaddi League) ಪ್ರಚಾರ ವಿಡಿಯೋ(ಪ್ರೊಮೋ) ಬಿಡುಗಡೆಯಾಗಿದೆ. ಟೂರ್ನಿಯ ಅಧಿಕೃತ ಪ್ರಾಯೋಜಕರಾದ ಸ್ಟಾರ್‌ ಸ್ಪೋರ್ಟ್ಸ್‌ ಭಾನುವಾರ ಟ್ವೀಟರ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌.ಧೋನಿ (MS Dhoni) ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. 

ಸುಮಾರು 1 ನಿಮಿಷದ ವಿಡಿಯೋದಲ್ಲಿ ಧೋನಿ ವಿವಿಧ ರೀತಿಯ ಜನರಿಗೆ ಶಕ್ತಿ ಹಾಗೂ ಪ್ರೇರಣೆಯ ಸಂಕೇತವಾಗಿ ಕಾಣಿಸಿಕೊಳ್ಳುತ್ತಾರೆ. ವಿಡಿಯೋದಲ್ಲಿ ಕೆಲ ತಾರಾ ಕಬಡ್ಡಿ ಆಟಗಾರರೂ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಈ ವಿಡಿಯೋ ವೈರಲ್‌ ಆಗಿದೆ.