ದುಬೈ(ಜ.13): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ (870 ರೇಟಿಂಗ್‌ ಅಂಕ) ಐಸಿಸಿ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. 

ಸಿಡ್ನಿ ಟೆಸ್ಟ್‌ನಲ್ಲಿ 131 ಹಾಗೂ 81 ರನ್‌ ಗಳಿಸಿದ ಆಸ್ಪ್ರೇಲಿಯಾದ ಸ್ಟೀವ್‌ ಸ್ಮಿತ್‌ (900) 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. 919 ಅಂಕ ಹೊಂದಿರುವ ಕೇನ್‌ ವಿಲಿಯಮ್ಸನ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇನ್ನುಳಿದಂತೆ ಆಸ್ಟ್ರೇಲಿಯಾದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್‌ ಮಾರ್ನಸ್ ಲಬುಶೇನ್‌ ಹಾಗೂ ಪಾಕಿಸ್ತಾನದ ನಾಯಕ ಬಾಬರ್ ಅಜಂ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.

ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಬ್ಯಾಟ್ಸ್‌ಮನ್‌ ಬೆನ್ ಸ್ಟೋಕ್ಸ್‌ 2 ಸ್ಥಾನ ಏರಿಕೆ ಕಂಡು 6ನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಒಂದು ಸ್ಥಾನ ಕುಸಿತ ಕಂಡ ಅಜಿಂಕ್ಯ ರಹಾನೆ 7ನೇ ಸ್ಥಾನ ಪಡೆದಿದ್ದಾರೆ. ಇನ್ನು ಸಿಡ್ನಿ ಟೆಸ್ಟ್‌ನಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಭಾರತದ ಚೇತೇಶ್ವರ್‌ ಪೂಜಾರ 2 ಸ್ಥಾನಗಳ ಏರಿಕೆ ಕಂಡು 8ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ ಹೆನ್ರಿ ನಿಕೋಲಸ್ 3 ಸ್ಥಾನ ಏರಿಕೆ ಕಂಡು 9ನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಡೇವಿಡ್ ವಾರ್ನರ್ 3 ಸ್ಥಾನ ಕುಸಿತ ಕಂಡು 10ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಮಾಡಿದ್ದೆಲ್ಲಾ ಮಾಡಿ ತಪ್ಪಾಯ್ತು ಸಾರಿ ಎಂದ ಆಸ್ಟ್ರೇಲಿಯಾ ನಾಯಕ!

ಇನ್ನು ಬೌಲಿಂಗ್‌ ವಿಭಾಗದಲ್ಲಿ ಪ್ಯಾಟ್‌ ಕಮಿನ್ಸ್‌, ಸ್ಟುವರ್ಟ್ ಬ್ರಾಡ್, ನೀಲ್ ವ್ಯಾಗ್ನರ್ ಹಾಗೂ ಟಿಮ್‌ ಸೌಥಿ ಕ್ರಮವಾಗಿ ಮೊದಲ 4 ಸ್ಥಾನಗಳಲ್ಲಿ ಭದ್ರವಾಗಿದ್ದಾರೆ. ಇನ್ನು ಸಿಡ್ನಿ ಟೆಸ್ಟ್‌ನಲ್ಲಿ ಮೊನಚಿನ ದಾಳಿ ನಡೆಸಿದ ಜೋಸ್ ಹೇಜಲ್‌ವುಡ್‌ 3 ಸ್ಥಾನ ಏರಿಕೆ ಕಂಡು 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನುಳಿದಂತೆ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್‌ 2 ಸ್ಥಾನ ಕುಸಿತ ಕಂಡು 9ನೇ ಸ್ಥಾನ ಪಡೆದರೆ, ಬುಮ್ರಾ 1 ಸ್ಥಾನ ಕುಸಿತ ಕಂಡು 10ನೇ ಸ್ಥಾನದಲ್ಲಿದ್ದಾರೆ.

ಆಲ್ರೌಂಡ್ ವಿಭಾಗದಲ್ಲಿ ರವೀಂದ್ರ ಜಡೇಜಾ ಒಂದು ಸ್ಥಾನ ಮೇಲೇರಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಬೆನ್‌ ಸ್ಟೋಕ್ಸ್‌ ಮೊದಲ ಸ್ಥಾನದಲ್ಲಿ ಭದ್ರವಾಗಿದ್ದಾರೆ. ಇನ್ನು ಜೇಸನ್ ಹೋಲ್ಡರ್, ಶಕೀಬ್ ಅಲ್ ಹಸನ್‌ ಹಾಗೂ ಕೈಲ್ ಜಾಮಿಸನ್‌ ಮೊದಲ 5 ಸ್ಥಾನದಲ್ಲಿದ್ದಾರೆ.