ಈ ವರ್ಷ ಟಿ20 ವಿಶ್ವಕಪ್ ಆಯೋಜನೆ ಕಷ್ಟವೆಂದ ಆಸ್ಟ್ರೇಲಿಯಾ
2020ರಲ್ಲಿ ಐಸಿಸಿ ಟಿ20 ವಿಶ್ವಕಪ್ ಆಯೋಜನೆ ಕಷ್ಟಸಾಧ್ಯವೆಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮೆಲ್ಬರ್ನ್(ಜೂ.17): ಸದ್ಯದ ಪರಿಸ್ಥಿತಿಯಲ್ಲಿ ಈ ವರ್ಷ ಟಿ20 ವಿಶ್ವಕಪ್ ಆಯೋಜನೆ ಅಸಾಧ್ಯ ಎಂದು ಕ್ರಿಕೆಟ್ ಆಸ್ಪ್ರೇಲಿಯಾ ಅಧ್ಯಕ್ಷ ಎರ್ಲ್ ಎಡ್ಡಿಂಗ್ಸ್ ಮಂಗಳವಾರ ಹೇಳಿದ್ದಾರೆ.
ವಿಶ್ವದಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಿಶ್ವಕಪ್‌ನಂತಹ ಟೂರ್ನಿಯನ್ನು ನಡೆಸುವುದು ವಾಸ್ತವಕ್ಕೆ ದೂರವಾದದ್ದು ಎಂದು ಎಡ್ಡಿಂಗ್ಸ್ ಹೇಳಿದ್ದಾರೆ. ಒಂದು ವೇಳೆ ಐಸಿಸಿ ಟಿ20 ವಿಶ್ವಕಪ್ ನಡೆಯದೇ ಹೋದರೆ ಆ ವೇಳೆಯಲ್ಲಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ನಡೆಸಲು ಬಿಸಿಸಿಐ ಲೆಕ್ಕಾಚಾರ ಹಾಕಿದೆ.
ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ 16 ರಾಷ್ಟ್ರಗಳು ಒಳಗೊಂಡ ವಿಶ್ವಕಪ್ ಟೂರ್ನಿಯನ್ನು ಆಸ್ಪ್ರೇಲಿಯಾದಲ್ಲಿ ನಡೆಸಲು ಐಸಿಸಿ ನಿರ್ಧರಿಸಿತ್ತು. ಆದರೆ ವಿಶ್ವದೆಲ್ಲೆಡೆ ಕೊರೋನಾ ಮಹಾಮಾರಿಗೆ 4.3 ಲಕ್ಷಕ್ಕೂ ಅಧಿಕ ಮಂದಿ ಜೀವ ತೆತ್ತಿದ್ದಾರೆ. ಇದರಿಂದಾಗಿ ಟೂರ್ನಿ ಮುಂದೂಡುವ ಸಾಧ್ಯತೆ ದಟ್ಟವಾಗಿದೆ. ಐಸಿಸಿ ಈ ಬಗ್ಗೆ ಜೂ.10 ರಂದು ನಿರ್ಧಾರ ಪ್ರಕಟಿಸಬೇಕಿತ್ತು. ಆದರೆ ಐಸಿಸಿ ಇನ್ನೊಂದು ತಿಂಗಳು ಅವಕಾಶ ತೆಗೆದುಕೊಂಡಿದೆ.
ಕೊರೋನಾ ಮುಕ್ತ ನ್ಯೂಜಿಲೆಂಡ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿ?
ಈ ಮೊದಲು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ. ಆದರೆ ಈ ಬಗ್ಗೆ ಐಸಿಸಿ ಇದುವರೆಗೂ ಯಾವುದೇ ದಿಟ್ಟ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.