T20 World Cup ಬೌಲರ್ಗಳಿಗಾಗಿ ಬ್ಯುಸಿನೆಸ್ ಕ್ಲಾಸ್ ಸೀಟ್ ತ್ಯಾಗ ಮಾಡಿದ ರೋಹಿತ್, ದ್ರಾವಿಡ್, ಕೊಹ್ಲಿ..!
ಐಸಿಸಿ ಟಿ20 ವಿಶ್ವಕಪ್ ಸೆಮೀಸ್‌ಗೆ ಲಗ್ಗೆಯಿಟ್ಟ ಟೀಂ ಇಂಡಿಯಾ
ಎರಡನೇ ಸೆಮಿಫೈನಲ್‌ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ
ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಅಡಿಲೇಡ್ ಓವಲ್ ಮೈದಾನ ಆತಿಥ್ಯ
ಅಡಿಲೇಡ್(ನ.08): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸಾಡಿದರೆ, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಡಲಿವೆ. ಇನ್ನು ಮೆಲ್ಬರ್ನ್‌ನಲ್ಲಿ ಜಿಂಬಾಬ್ವೆ ವಿರುದ್ದ ಕೊನೆಯ ಸೂಪರ್ 12 ಪಂದ್ಯವನ್ನಾಡಿದ ಟೀಂ ಇಂಡಿಯಾ, ಸೋಮವಾರ ಮೆಲ್ಬರ್ನ್‌ನಿಂದ ಅಡಿಲೇಡ್‌ಗೆ ಬಂದಿಳಿದಿದೆ.
ಇನ್ನು ಇದೇ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಹೆಡ್ ಕೋಚ್ ರಾಹುಲ್ ದ್ರಾವಿಡ್‌ಗೆ ಮೀಸಲಾಗಿದ್ದ ವಿಮಾನದ ಬ್ಯುಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ವೇಗಿಗಳಾದ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಆರ್ಶದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ವಿಶ್ವಕಪ್ ಟೂರ್ನಿಗೆ ಪ್ರತಿ ತಂಡಕ್ಕೆ ಕೇವಲ 4 ಬ್ಯುಸಿನೆಸ್ ಟಿಕೆಟ್‌ಗಳನ್ನು ಮಾತ್ರ ಮೀಸಲಿಡಲಾಗಿದೆ. ಮಹತ್ವದ ಸೆಮಿಫೈನಲ್ ಪಂದ್ಯಕ್ಕೆ ವೇಗಿಗಳಿಗೆ ಆಯಾಸವಾಗದಿರಲಿ ಎನ್ನುವ ಉದ್ದೇಶದಿಂದ ರೋಹಿತ್, ರಾಹುಲ್ ಹಾಗೂ ಕೊಹ್ಲಿ ತಮ್ಮ ಬ್ಯುಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ವೇಗಿಗಳಿಗೆ ಬಿಟ್ಟುಕೊಟ್ಟು ಮಾದರಿಯಾಗಿದ್ದಾರೆ.
ಭಾರತ ಸೆಮೀಸ್ ಪಂದ್ಯದ ಟಿಕೆಟ್ ಸೋಲ್ಡ್‌ಔಟ್
ಐಸಿಸಿ ಟಿ20 ವಿಶ್ವಕಪ್ ಗುರುವಾರ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿದೆ ಎಂದು ತಿಳಿದುಬಂದಿದೆ. ಅಡಿಲೇಡ್ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯಗಳು ನಡೆಯಲಿದ್ದು, ಮಾರಾಟಕ್ಕಿಟ್ಟ ಹೆಚ್ಚುವರಿ ಟಿಕೆಟ್‌ಗಳು ಕೂಡಾ ಕೆಲ ಗಂಟೆಗಳಲ್ಲೇ ಮಾರಾಟವಾಗಿದೆ ಎಂದು ವರದಿಯಾಗಿದೆ.
ಭಾರತ-ಪಾಕಿಸ್ತಾನ ಫೈನಲ್ ಮುಖಾಮುಖಿಗೆ ಇದೆ ಅವಕಾಶ, ಮರುಕಳಿಸುತ್ತಾ 2007ರ ಇತಿಹಾಸ!
ಕ್ರೀಡಾಂಗಣ 53,000 ಆಸನ ಸಾಮರ್ಥ್ಯ ಹೊಂದಿದ್ದು, ಬಹುತೇಕ ಆಸನಗಳು ಪೂರ್ತಿಯಾಗುವ ಸಾಧ್ಯತೆ ಇದೆ. ಇದೇ ವೇಳೆ ಸಿಡ್ನಿಯಿಂದ ಅಡಿಲೇಡ್ ಪ್ರಯಾಣಿಸುವ ವಿಮಾನದ ಟಿಕೆಟ್ ಬೆಲೆಗಳೂ ಮೂರರಿಂದ ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ಕೆಲ ವರದಿಗಳು ತಿಳಿಸಿವೆ.
ಅಡಿಲೇಡ್ ತಲುಪಿದ ಭಾರತ ಆಟಗಾರರು
ಗುರುವಾರದ ಮಹತ್ವದ ಪಂದ್ಯಕ್ಕಾಗಿ ಸೋಮವಾರ ಟೀಂ ಇಂಡಿಯಾ ಆಟಗಾರರು ಅಡಿಲೇಡ್‌ಗೆ ಆಗಮಿಸಿದರು. ಗುಂಪು ಹಂತದ ಕೊನೆ ಪಂದ್ಯವನ್ನು ಭಾರತ, ಜಿಂಬಾಬ್ವೆ ವಿರುದ್ಧ ಮೆಲ್ಬರ್ನ್‌ನಲ್ಲಿ ಆಡಿತ್ತು. ಆಟಗಾರರು ಅಲ್ಲಿಂದ ನೇರವಾಗಿ ಅಡಿಲೇಡ್‌ಗೆ ತಲುಪಿದರು. ಇದರ ವಿಡಿಯೋವನ್ನು ಬಿಸಿಸಿಐ ಟ್ವೀಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.
ನಾಕೌಟ್ ಫಲಿತಾಂಶಕ್ಕೆ ತಲಾ 10 ಓವರ್ ಆಟ
ಅಡಿಲೇಡ್: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಫಲಿತಾಂಶ ನಿರ್ಧರಿಸಲು ತಲಾ 10 ಓವರ್ ಆಟ ನಡೆಯುವುದು ಕಡ್ಡಾಯ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಗುಂಪು ಹಂತದ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ ಫಲಿತಾಂಶ ನಿರ್ಣಯಿಸಲು ಎರಡೂ ತಂಡಗಳು ತಲಾ 5 ಓವರ್ ಆಡಿದ್ದರೆ ಸಾಕಿತ್ತು. ಆದರೆ ನಾಕೌಟ್ ಪಂದ್ಯಗಳಿಗೆ ಈಗ ಹೊಸ ನಿಯಮ ಜಾರಿಗೊಳಿಸಿದೆ. ಇನ್ನು ಸೆಮೀಸ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇದ್ದು, ನಿಗದಿತ ದಿನ ಮಳೆಯಿಂದಾಗಿ ಪಂದ್ಯ ನಡೆಯದಿದ್ದರೆ ಮರುದಿನ ಪಂದ್ಯ ನಡೆಸಲಾಗುತ್ತದೆ.