Asianet Suvarna News Asianet Suvarna News

T20 World Cup ಐರ್ಲೆಂಡ್‌ ವಿರುದ್ಧ ಗೆದ್ದು ಸೆಮೀಸ್‌ಗೇರುತ್ತಾ ಕಿವೀಸ್‌?

ಅಡಿಲೇಡ್‌ನಲ್ಲಿಂದು ನ್ಯೂಜಿಲೆಂಡ್ ತಂಡಕ್ಕಿಂದು ಐರ್ಲೆಂಡ್ ಸವಾಲು
ಸೆಮೀಸ್‌ಗೇರುವ ಕನವರಿಯಲ್ಲಿದೆ ಕೇನ್ ವಿಲಿಯಮ್ಸನ್ ಪಡೆ
ಪ್ರತಿಷ್ಠೆಗಾಗಿ ಕಾದಾಡಲು ಸಜ್ಜಾದ ಐರ್ಲೆಂಡ್ ಕ್ರಿಕೆಟ್ ತಂಡ

ICC T20 World Cup New Zealand take on Ireland in Adelaide and eyes on Semis spot kvn
Author
First Published Nov 4, 2022, 8:40 AM IST

ಅಡಿಲೇಡ್‌(ನ.04): ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್‌ಗೇರಲು ಕಳೆದ ಬಾರಿ ರನ್ನರ್‌-ಅಪ್‌ ನ್ಯೂಜಿಲೆಂಡ್‌ ಕಾತರಿಸುತ್ತಿದ್ದು, ಶುಕ್ರವಾರ ಕೊನೆ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಸೆಣಸಾಡಲಿದೆ. ಸದ್ಯ 5 ಅಂಕದೊಂದಿಗೆ ಗುಂಪು 1ರಲ್ಲಿ ಅಗ್ರಸ್ಥಾನದಲ್ಲಿರುವ ಕಿವೀಸ್‌ ಈ ಪಂದ್ಯದಲ್ಲಿ ಗೆದ್ದರೆ ನಾಕೌಟ್‌ಗೇರುವುದು ಬಹುತೇಕ ಖಚಿತ. ನೆಟ್‌ ರನ್‌ರೇಟ್‌ ಆಧಾರದಲ್ಲಿ ಇಂಗ್ಲೆಂಡ್‌, ಆಸ್ಪ್ರೇಲಿಯಾಗಿಂತ ಮುಂದಿರುವುದು ಕಿವೀಸ್‌ಗೆ ಪ್ಲಸ್‌ ಪಾಯಿಂಟ್‌. ಹೀಗಾಗಿ ಗೆದ್ದು ನೆಟ್‌ ರನ್‌ರೇಟ್‌ನಲ್ಲಿ ಮುನ್ನಡೆ ಕಾಯ್ದುಕೊಳ್ಳುವುದು ತಂಡದ ಪ್ರಮುಖ ಗುರಿ. ಒಂದು ವೇಳೆ ಕಿವೀಸ್‌ ಸೋತರೆ, ಅಥವಾ ಮಳೆಯಿಂದಾಗಿ ಪಂದ್ಯ ರದ್ದಾದರೆ ಗುಂಪಿನ ನಾಕೌಟ್‌ ರೇಸ್‌ ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದ್ದು, ಇತರೆ ಪಂದ್ಯಗಳ ಫಲಿತಾಂಶ ಹಾಗೂ ನೆಟ್‌ ರನ್‌ರೇಟ್‌ ನಿರ್ಣಾಯಕ ಪಾತ್ರ ವಹಿಸಲಿದೆ. 

ಇಂಗ್ಲೆಂಡ್‌ ಎದುರು ನ್ಯೂಜಿಲೆಂಡ್ ತಂಡವು ಸೋಲುಂಡಿದ್ದು, ಕೇನ್ ವಿಲಿಯಮ್ಸನ್‌ ಪಡೆಗೆ ಎಚ್ಚರಿಕೆಯ ಕರೆಗಂಟೆ ಎನಿಸಿಕೊಂಡಿದೆ. ಇನ್ನು ಸ್ವತಃ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್‌ ಮಂದಗತಿಯಲ್ಲಿ ರನ್‌ ಬಾರಿಸುತ್ತಿರುವುದು ಉಳಿದ ಬ್ಯಾಟರ್‌ಗಳ ಮೇಲೆ ಹೆಚ್ಚು ಒತ್ತಡ ಬೀಳುವಂತೆ ಮಾಡಿದೆ. ಕೇನ್ ವಿಲಿಯಮ್ಸನ್ ನಾಯಕನಾಗಿ ಹೆಚ್ಚು ಯಶಸ್ವಿಯಾಗಿದ್ದರೂ ಸಹಾ, ಬ್ಯಾಟರ್‌ ಆಗಿಯೂ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡಬೇಕಾದ ಒತ್ತಡಕ್ಕೆ ಸಿಲುಕಿದ್ದು, ಐರ್ಲೆಂಡ್ ಎದುರು ಸ್ಪೋಟಕ ಬ್ಯಾಟಿಂಗ್ ನಡೆಸುವ ನಿರೀಕ್ಷೆಯಲ್ಲಿದ್ದಾರೆ.

ಇನ್ನು ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಡೆವೊನ್ ಕಾನ್‌ವೇ ಹಾಗೂ ಫಿನ್ ಅಲೆನ್ ಸ್ಪೋಟಕ ಆರಂಭ ಒದಗಿಸಿಕೊಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಫ್ಸ್‌ ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇನ್ನು ಬೌಲಿಂಗ್‌ನಲ್ಲಿ ತ್ರಿವಳಿ ವೇಗಿಗಳಾದ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಹಾಗೂ ಲಾಕಿ ಫರ್ಗ್ಯೂಸನ್ ಮಾರಕ ದಾಳಿ ಸಂಘಟಿಸುತ್ತಿದ್ದು, ಸ್ಪಿನ್ನರ್‌ಗಳಾದ ಇಶ್ ಸೋಧಿ ಹಾಗೂ ಮಿಚೆಲ್ ಸ್ಯಾಂಟ್ನರ್‌ ಕೂಡಾ ಎದುರಾಳಿ ತಂಡದ ಬ್ಯಾಟರ್‌ಗಳಿಗೆ ಸವಾಲೆನಿಸಿಕೊಂಡಿದ್ದಾರೆ.

ಮತ್ತೊಂದೆಡೆ ಐರ್ಲೆಂಡ್‌ ಸದ್ಯ 3 ಅಂಕ ಹೊಂದಿದ್ದು, ಗೆದ್ದರೂ ನಾಕೌಟ್‌ಗೇರುವುದು ಕಷ್ಟ. ಹೀಗಿದ್ದೂ ಐರ್ಲೆಂಡ್ ತಂಡವು ಬ್ಯಾಟಿಂಗ್‌ನಲ್ಲಿ ಪೌಲ್ ಸ್ಟರ್ಲಿಂಗ್, ನಾಯಕ ಆಂಡ್ರ್ಯೂ ಬಲ್ಬ್ರೈನ್, ಲಾರ್ಕನ್ ಟುಕರ್, ಹ್ಯಾರಿ ಟೆಕ್ಟರ್ , ಕುರ್ಟಿಸ್ ಕ್ಯಾಂಪರ್ ಅವರಂತಹ ಬ್ಯಾಟರ್‌ಗಳಿದ್ದು, ಕಿವೀಸ್ ಬೌಲಿಂಗ್ ಪಡೆಯ ಎದುರು ಅಬ್ಬರಿಸಲು ಎದುರು ನೋಡುತ್ತಿದ್ದಾರೆ. ನ್ಯೂಜಿಲೆಂಡ್ ಪಾಲಿಗೆ ಈ ಪಂದ್ಯ ಸೆಮೀಸ್‌ ಕನಸಾಗಿದ್ದರೇ, ಐರ್ಲೆಂಡ್ ಪಾಲಿಗೆ ಇದು ಪ್ರತಿಷ್ಠೆಯ ಪಂದ್ಯ ಎನಿಸಿಕೊಂಡಿದೆ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್‌ವೇ(ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್‌(ನಾಯಕ), ಗ್ಲೆನ್ ಫಿಲಿಫ್ಸ್‌, ಡೇರಲ್ ಮಿಚೆಲ್, ಜೇಮ್ಸ್‌ ನೀಶಮ್‌, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್‌, ಲಾಕಿ ಫರ್ಗ್ಯೂಸನ್, ಇಶ್ ಸೋಧಿ.

ಐರ್ಲೆಂಡ್: ಪೌಲ್ ಸ್ಟರ್ಲಿಂಗ್, ಆಂಡ್ರ್ಯೂ ಬಲ್ಬ್ರೈನ್(ನಾಯಕ), ಲಾರ್ಕನ್ ಟುಕರ್(ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕುರ್ಟಿಸ್ ಕ್ಯಾಂಪರ್, ಜಾರ್ಜ್‌ ಡಾಕ್ರೆಲ್‌, ಗೆರೆತ್ ಡೆನ್ಲಿ, ಮಾರ್ಕ್‌ ಅಡೈರ್, ಫಿನ್ ಹ್ಯಾಂಡ್, ಬ್ಯಾರಿ ಮೆಕಾರ್ಥಿ, ಜೋಶ್ವಾ ಲಿಟ್ಲ್‌. 

ಪಂದ್ಯ: ಬೆಳಗ್ಗೆ 9.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಹಾಟ್‌ಸ್ಟಾರ್.

Follow Us:
Download App:
  • android
  • ios