ಜಿಂಬಾಬ್ವೆ ಎದುರು ನೆದರ್‌ಲೆಂಡ್ಸ್‌ಗೆ ಭರ್ಜರಿ ಜಯಭೇರಿಸೂಪರ್ 12 ಹಂತದಲ್ಲಿ ಮೊದಲ ಗೆಲುವು ದಾಖಲಿಸಿದ ನೆದರ್‌ಲೆಂಡ್ಸ್ಈ ಸೋಲಿನೊಂದಿಗೆ ಜಿಂಬಾಬ್ವೆ ಸೆಮೀಸ್ ಕನಸು ಬಹುತೇಕ ಭಗ್ನ

ಅಡಿಲೇಡ್‌(ನ.02): ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ನೆದರ್‌ಲೆಂಡ್ಸ್‌ ತಂಡವು, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್12 ಹಂತದಲ್ಲಿ ಮೊದಲ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಜಿಂಬಾಬ್ವೆ ನೀಡಿದ್ದ 118 ರನ್‌ಗಳ ಸಾಧಾರಣ ಗುರಿಯನ್ನು ಕೇವಲ 5 ವಿಕೆಟ್ ಕಳೆದುಕೊಂಡು ಇನ್ನೂ 12 ಎಸೆತಗಳು ಬಾಕಿ ಇರುವಂತೆಯೇ ನೆದರ್‌ಲೆಂಡ್ಸ್ ತಂಡವು ಗೆಲುವಿನ ನಗೆ ಬೀರಿದೆ. ಈ ಗೆಲುವಿನೊಂದಿಗೆ ನೆದರ್‌ಲೆಂಡ್ಸ್‌ ತಂಡವು ಸೂಪರ್ 12 ಹಂತದಲ್ಲಿ ಗೆಲುವಿನ ಖಾತೆ ತೆರೆದಿದೆ. ಇನ್ನೊಂದೆಡೆ ಈ ಸೋಲಿನೊಂದಿಗೆ ಜಿಂಬಾಬ್ವೆ ತಂಡದ ಸೆಮೀಸ್‌ ಕನಸು ಬಹುತೇಕ ಭಗ್ನವಾಗಿದೆ. 

ಇಲ್ಲಿನ ಅಡಿಲೇಡ್ ಓವೆಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್ ತಂಡವು ಸ್ಟಿಫನ್ ಮೈಬರ್ಗ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಸ್ಟಿಫನ್ ಮೈಬರ್ಗ್ ಕೇವಲ 8 ರನ್ ಬಾರಿಸಿ ಮುಜರಬಾನಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ನೆದರ್‌ಲೆಂಡ್ಸ್ ತಂಡವು 17 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟರ್ ಸ್ಟಿಫನ್ ವಿಕೆಟ್ ಕಳೆದುಕೊಂಡಿತು.

T20 World Cup ನೆದರ್‌ಲೆಂಡ್ಸ್ ಎದುರು ಟಾಸ್ ಗೆದ್ದ ಜಿಂಬಾಬ್ವೆ ಬ್ಯಾಟಿಂಗ್ ಆಯ್ಕೆ

ಒ'ಡೌಡ್-ಕೂಪರ್ ಜುಗಲ್ಬಂದಿ: ಆರಂಭದಲ್ಲೇ ಸ್ಟಿಫನ್ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ನೆದರ್‌ಲೆಂಡ್ಸ್ ತಂಡಕ್ಕೆ ಎರಡನೇ ವಿಕೆಟ್‌ಗೆ ಟಾಮ್ ಕೂಪರ್ ಹಾಗೂ ಮ್ಯಾಕ್ಸ್‌ ಒ'ಡೌಡ್‌ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್‌ಗೆ ಈ ಜೋಡಿ 73 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಟಾಮ್ ಕೂಪರ್ ಕೇವಲ 29 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಆಕರ್ಷಕ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಮ್ಯಾಕ್ ಒ ಡೌಡ್ 47 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 52 ರನ್ ಬಾರಿಸುವ ಮೂಲಕ ನೆದರ್‌ಲೆಂಡ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Scroll to load tweet…

ನೆದರ್‌ಲೆಂಡ್ಸ್ ದಿಢೀರ್ ಕುಸಿತ: ಒಂದು ಹಂತದಲ್ಲಿ 90 ರನ್‌ಗಳವರೆಗೂ ಕೇವಲ ಒಂದು ವಿಕೆಟ್ ಕಳೆದುಕೊಂಡು ಸುಲಭ ಗೆಲುವಿನತ್ತ ದಾಪುಗಾಲಿಡುತ್ತಿದ್ದ ನೆದರ್‌ಲೆಂಡ್ಸ್ ತಂಡವು ಟಾಮ್ ಕೂಪರ್ ವಿಕೆಟ್ ಪತನವಾಗುತ್ತಿದ್ದಂತೆಯೇ ದಿಢೀರ್ ಕುಸಿತ ಕಂಡಿತು. ಇದಾದ ಬಳಿಕ ನೆದರ್‌ಲೆಂಡ್ಸ್ ತಂಡವು ತನ್ನ ಖಾತೆಗೆ 26 ರನ್ ಸೇರಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಆದರೆ ಬಾಸ್ ಡೆ ಲೋಡೆ ಅಜೇಯ 12 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾವ್ವೆ ತಂಡವು ಆರಂಭಿಕ ಆಘಾತ ಅನುಭವಿಸಿತು. ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಜಿಂಬಾಬ್ವೆ ತಂಡವು 20 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. . ಇದಾದ ಬಳಿಕ 4ನೇ ವಿಕೆಟ್‌ಗೆ ಸೀನ್ ವಿಲಿಯಮ್ಸ್ ಹಾಗೂ ಸಿಕಂದರ್ ರಾಜಾ 48 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸೀನ್ ವಿಲಿಯಮ್ಸ್‌ 28 ರನ್ ಬಾರಿಸಿದರೆ, ಸ್ಪೋಟಕ ಬ್ಯಾಟಿಂಗ್ ನಡೆಸಿದ ಸಿಕಂದರ್ ರಾಜಾ ಕೇವಲ 24 ಎಸೆತಗಳಲ್ಲಿ 3 ಬೌಂಡರಿ ಹಾಗು 3 ಸಿಕ್ಸರ್ ಸಹಿತ 40 ರನ್ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಸೀನ್ ವಿಲಿಯಮ್ಸ್ ಹಾಗೂ ಸಿಕಂದರ್ ರಾಜಾ ಹೊರತುಪಡಿಸಿ ಜಿಂಬಾಬ್ವೆಯ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಖಲಿಸದ್ದೇ ಹೋದದ್ದು ಜಿಂಬಾಬ್ವೆ ತಂಡದ ಬೃಹತ್ ಮೊತ್ತ ಕಲೆಹಾಕುವ ಕನಸಿಗೆ ತಣ್ಣೀರೆರಚಿದಂತಾಯಿತು.