Asianet Suvarna News Asianet Suvarna News

T20 World Cup: ಭಾರತ vs ಪಾಕಿಸ್ತಾನ ನಡುವಿನ ಪಂದ್ಯ ಗೆಲ್ಲೋರು ಯಾರು..?

* ಭಾರತ ವರ್ಸಸ್‌ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭ

* ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ

* ವಿಶ್ವಕಪ್ ಟೂರ್ನಿಯಲ್ಲಿ ಪಾಕ್‌ ವಿರುದ್ದ ಒಮ್ಮೆಯೂ ಸೋತಿಲ್ಲ ಭಾರತ

ICC T20 World Cup India vs Pakistan winning Prediction kvn
Author
Bengaluru, First Published Oct 23, 2021, 7:59 PM IST

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಅಕ್ಟೋಬರ್ 24ರ ಸಂಜೆ 7.30ರಿಂದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ (Pakistan Cricket Team) ನಡುವಿನ ಜಿದ್ದಾಜಿದ್ದಿನ ಪಂದ್ಯ ಆರಂಭವಾಗಲಿದೆ. ಸೂಪರ್ 12 ಹಂತದ ಪಂದ್ಯಕ್ಕೂ ಮುನ್ನ ಉಭಯ ತಂಡಗಳು 2 ಅಭ್ಯಾಸ ಪಂದ್ಯಗಳನ್ನಾಡಿವೆ. ಅಭ್ಯಾಸ ಪಂದ್ಯದಲ್ಲಿ ಉಭಯ ತಂಡಗಳು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಉತ್ತಮ ತಾಲೀಮು ನಡೆಸಿವೆ. 

ಭಾರತ ಹಾಗೂ ಪಾಕಿಸ್ತಾನ ಎರಡು ತಂಡಗಳು ಮೇಲ್ನೋಟಕ್ಕೆ ಸಾಕಷ್ಟು ಬಲಿಷ್ಠವಾಗಿ ಕಂಡು ಬಂದಿದ್ದರೂ, ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ (Team India) ಕೊಂಚ ಸಮತೋಲಿತವಾಗಿ ಕಂಡು ಬರುತ್ತಿದೆ. ಸದ್ಯದ ವರದಿ ಪ್ರಕಾರ ಟೀಂ ಇಂಡಿಯಾ ಗೆಲ್ಲುವ ಸಾಧ್ಯತೆ 67% ಇದ್ದರೆ, ಪಾಕಿಸ್ತಾನ ಗೆಲ್ಲುವ ಸಾಧ್ಯತೆ 33%  ಇದೆ.

T20 World Cup: ಭಾರತ ವಿರುದ್ದದ ಪಂದ್ಯಕ್ಕೆ 12 ಆಟಗಾರರನ್ನೊಳಗೊಂಡ ಪಾಕಿಸ್ತಾನ ತಂಡ ಪ್ರಕಟ

ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 5 ಬಾರಿ ಮುಖಾಮುಖಿಯಾಗಿದ್ದು, ಐದೂ ಬಾರಿಯೂ ಭಾರತ ತಂಡವು ಪಾಕ್ ವಿರುದ್ದ ಗೆಲುವಿನ ನಗೆ ಬೀರಿದೆ. ಹೀಗಾಗಿ ಈ ಬಾರಿ ಪಾಕಿಸ್ತಾನ ತಂಡವು ಯಾವ ರೀತಿಯ ರಣತಂತ್ರವನ್ನು ಹೆಣೆದುಕೊಂಡು ಮೈದಾನಕ್ಕಿಳಿಯಲಿದೆ ಎನ್ನುವ ಕುತೂಹಲ ಜೋರಾಗಿದೆ. 

ಟಿ20 ವಿಶ್ವಕಪ್‌ ಟೂರ್ನಿಯ ಈ ಹಿಂದಿನ ಮುಖಾಮುಖಿಯ ಫಲಿತಾಂಶ ಹೀಗಿತ್ತು ನೋಡಿ:

2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 141 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಪಾಕ್‌ 7 ವಿಕೆಟ್ ಕಳೆದುಕೊಂಡು 141 ರನ್‌ ಬಾರಿಸಿತು. ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಬಾಲೌಟ್ ಮೊರೆ ಹೋಗಲಾಯಿತು. ಆಗ ಧೋನಿ ನೇತೃತ್ವದ ಟೀಂ ಇಂಡಿಯಾ 3-0 ಅಂತರದಲ್ಲಿ ರೋಚಕ ಗೆಲುವು ದಾಖಲಿಸಿತು.

2007ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಮತ್ತೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಭಾರತ ಗಂಭೀರ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 157 ರನ್‌ ಬಾರಿಸಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ 142 ರನ್‌ ಬಾರಿಸಿ ಆಲೌಟ್ ಆಯಿತು. ಭಾರತ 5 ರನ್‌ಗಳ ರೋಚಕ ಜಯ ಸಾಧಿಸಿ ಟಿ20 ಚಾಂಪಿಯನ್ ಆಗಿ ಹೊರಹೊಮ್ಮಿತು.

2012ರಲ್ಲಿ ಕೊಲಂಬೋದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 128 ರನ್‌ ಬಾರಿಸಿ ಸರ್ವಪತನ ಕಂಡಿತ್ತು. ಟೀಂ ಇಂಡಿಯಾ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.

2014ರಲ್ಲಿ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 7 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತ್ತು. ಸಾಧಾರಣ ಗುರಿ ಬೆನ್ನತ್ತಿದ ಭಾರತ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.

2016ರಲ್ಲಿ ಕೋಲ್ಕತದ ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 8 ವಿಕೆಟ್ ಕಳೆದುಕೊಂಡು ಕೇವಲ 118 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಭಾರತ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು. 

ಅಭ್ಯಾಸ ಪಂದ್ಯದಲ್ಲಿ ಉಭಯ ತಂಡಗಳ ಪ್ರದರ್ಶನ ಹೇಗಿತ್ತು.?

ಸೂಪರ್ 12 ಪಂದ್ಯಕ್ಕೂ ಮುನ್ನ ನಡೆದ 2 ಅಭ್ಯಾಸ ಪಂದ್ಯಗಳಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುವ ಮೂಲಕ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳೆದುರು ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಭಾರತ ಭರ್ಜರಿ ಗೆಲುವು ದಾಖಲಿಸಿತ್ತು. ಇಂಗ್ಲೆಂಡ್ ವಿರುದ್ದ ಇಶಾನ್ ಕಿಶನ್ ಹಾಗೂ ಕೆ.ಎಲ್ ರಾಹುಲ್ (KL Rahul) ಅರ್ಧಶತಕ ಚಚ್ಚಿದ್ದರು. ಇನ್ನು ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಅರ್ಧಶತಕ ಬಾರಿಸಿದ್ದರು.

ಇನ್ನು ಪಾಕಿಸ್ತಾನ ತಂಡವು ವಿಂಡೀಸ್ ವಿರುದ್ದದ ಮೊದಲ ಅಭ್ಯಾಸ ಪಂದ್ಯದಲ್ಲಿ ಬಾಬರ್ ಅಜಂ (Babar Azam) 50 ರನ್‌ ಬಾರಿಸಿದ್ದರು. ಇನ್ನು ದಕ್ಷಿಣ ಆಫ್ರಿಕಾ ವಿರುದ್ದದ ಅಭ್ಯಾಸ ಪಂದ್ಯದಲ್ಲಿ ಫಖರ್ ಜಮಾನ್ ಅರ್ಧಶತಕ ಚಚ್ಚಿದ್ದರು.   

Follow Us:
Download App:
  • android
  • ios