ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯಾವಳಿಗಳು ಮುಕ್ತಾಯಟೂರ್ನಿಯಲ್ಲಿ ಹಲವು ಅಚ್ಚರಿಗಳಿಗೆ ಸಾಕ್ಷಿಯಾದ ಕ್ರಿಕೆಟ್ ಅಭಿಮಾನಿಗಳುಬಲಾಢ್ಯ ತಂಡಗಳಿಗೂ ಮಣ್ಣುಮುಕ್ಕಿಸಿದ ಕ್ರಿಕೆಟ್ ಶಿಶುಗಳು

ಮೆಲ್ಬರ್ನ್‌(ನ.08): ಆರಂಭದಲ್ಲೇ ಆಘಾತಕಾರಿ ಫಲಿತಾಂಶಕ್ಕೆ ಸಾಕ್ಷಿಯಾಗಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದ್ದ 2022ರ ಐಸಿಸಿ ಟಿ20 ವಿಶ್ವಕಪ್‌ ಈಗ ಕ್ಲೈಮ್ಯಾಕ್ಸ್‌ ಹಂತ ತಲುಪಿದೆ. ಅರ್ಹತಾ ಸುತ್ತಿನ ಆರಂಭದಲ್ಲೇ ಆಘಾತಕಾರಿ ಫಲಿತಾಂಶ ನೀಡಿದ್ದ ಚುಟುಕು ಕ್ರಿಕೆಟ್‌ ವಿಶ್ವಕಪ್‌, ಸೂಪರ್‌-12ರ ಹಂತದ ಕೊನೆ ದಿನದವರೆಗೂ ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು. ಇದುವರೆಗೂ ಕಂಡಿರದ ರೀತಿ ಹಲವು ಅಚ್ಚರಿಯ ಫಲಿತಾಂಶಗಳು ಟೂರ್ನಿಯಲ್ಲಿ ಕಂಡು ಬಂತು. ಮಾಜಿ ಚಾಂಪಿಯನ್‌ ಶ್ರೀಲಂಕಾಕ್ಕೆ ನಮೀಬಿಯಾ ನೀಡಿದ ಶಾಕ್‌ ಮೂಲಕ ಅರ್ಹತಾ ಸುತ್ತು ಆರಂಭವಾದರೆ, ದಕ್ಷಿಣ ಆಫ್ರಿಕಾಕ್ಕೆ ನೆದರ್ಲೆಂಡ್‌್ಸ ಆಘಾತಕಾರಿ ಸೋಲುಣಿಸುವದರೊಂದಿಗೆ ಸೂಪರ್‌-12ರ ಹಂತ ಮುಕ್ತಾಯಗೊಂಡಿತು. ಟೂರ್ನಿಯ ಕೆಲ ಆಘಾತಕಾರಿ, ರೋಚಕ, ಅಚ್ಚರಿಯ ಫಲಿತಾಂಶಗಳ ವಿವರ ಇಲ್ಲಿವೆ...

ಲಂಕಾಕೆ ನಮೀಬಿಯಾ ಶಾಕ್‌:

ಟೂರ್ನಿಯ ಮೊದಲ ದಿನ ಶ್ರೀಲಂಕಾ ತಂಡ ನಮೀಬಿಯಾ ವಿರುದ್ಧ 55 ರನ್‌ಗಳಿಂದ ಆಘಾತಕಾರಿ ಸೋಲುಂಡಿತು. ನಮೀಬಿಯಾ 7 ವಿಕೆಟ್‌ಗೆ 163 ರನ್‌ ಕಲೆಹಾಕಿದರೆ, ಲಂಕಾ 19 ಓವರಲ್ಲಿ 108 ರನ್‌ಗೆ ಆಲೌಟ್‌ ಆಯಿತು. ಇದರಿಂದ ಲಂಕಾ ಅರ್ಹತಾ ಸುತ್ತಿನಲ್ಲೇ ಹೊರಬೀಳುವ ಆತಂಕಕ್ಕೆ ಗುರಿಯಾದರೂ ಬಳಿಕ ಪುಟಿದೆದ್ದು ಪ್ರಧಾನ ಸುತ್ತಿಗೇರಿತು. ನಮೀಬಿಯಾ ಅರ್ಹತಾ ಸುತ್ತಲ್ಲೇ ಹೊರಬಿತ್ತು.

ಡಬಲ್‌ ಚಾಂಪಿಯನ್ನರಿಗೆ ಆಘಾತ:

2 ಬಾರಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ ದೈತ್ಯ, ಸ್ಫೋಟಕ ಆಟಗಾರರನ್ನು ಹೊಂದಿರುವ ತಂಡ. ಆದರೆ ಈ ಬಾರಿ ಅರ್ಹತಾ ಸುತ್ತಲ್ಲಿ ಆಡಿದ ವಿಂಡೀಸ್‌ ಮೊದಲ ಪಂದ್ಯದಲ್ಲೇ ಕ್ರಿಕೆಟ್‌ ಶಿಶು ಸ್ಕಾಟ್ಲೆಂಡ್‌ ವಿರುದ್ಧ ಸೋತು ಅಚ್ಚರಿ ಮೂಡಿಸಿತು. ಸ್ಕಾಟ್ಲೆಂಡ್‌ 5 ವಿಕೆಟ್‌ಗೆ 160 ರನ್‌ ಕಲೆ ಹಾಕಿದರೆ, 18.3 ಓವರ್‌ ಬ್ಯಾಟ್‌ ಮಾಡಿದ ವಿಂಡೀಸ್‌ 118 ರನ್‌ಗೆ ಸರ್ವಪತನ ಕಂಡಿತು. ಇದು ತಂಡಕ್ಕೆ ನುಂಗಲಾರದ ತುತ್ತಾಯಿತು. ಬಳಿಕ ಅರ್ಹತಾ ಸುತ್ತಿನಲ್ಲೇ ತನ್ನ 3ನೇ ಪಂದ್ಯದಲ್ಲಿ ವಿಂಡೀಸ್‌, ಐರ್ಲೆಂಡ್‌ ವಿರುದ್ಧ ಸೋತು ಟೂರ್ನಿಯಿಂದಲೇ ಹೊರಬಿತ್ತು. ಗೆಲ್ಲಲೇಬೇಕಾದ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಹೀನಾಯವಾಗಿ ಸೋತು ಮುಖಂಭಗಕ್ಕೊಳಗಾಯಿತು.

ಇಂಗ್ಲೆಂಡ್‌ಗೆ ಅನಿರೀಕ್ಷಿತ ಸೋಲು:

ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿರುವ ಇಂಗ್ಲೆಂಡ್‌ ಕೂಡಾ ಅನಿರೀಕ್ಷಿತ ಸೋಲು ಕಂಡಿದೆ. ವೆಸ್ಟ್‌ಇಂಡೀಸನ್ನು ಟೂರ್ನಿಯಿಂದಲೇ ಹೊರಹಾಕಿದ್ದ ಐರ್ಲೆಂಡ್‌, ಇಂಗ್ಲೆಂಡ್‌ಗೂ ಸೋಲಿನ ಆಘಾತ ನೀಡಿತು. ಮಳೆ ಪೀಡಿತ ಪಂದ್ಯದಲ್ಲಿ ತಂಡ 5 ರನ್‌ಗಳ ರೋಚಕ ಗೆಲುವು ಸಾಧಿಸಿತು. ಆದರೆ ಬಳಿಕ ಅತ್ಯುತ್ತಮ ಪ್ರದರ್ಶನ ತೋರಿದ ಇಂಗ್ಲೆಂಡ್‌ ಸೆಮಿಫೈನಲ್‌ ಪ್ರವೇಶಿಸಲು ಯಶಸ್ವಿಯಾಯಿತು.

ಭಾರತ-ಪಾಕಿಸ್ತಾನ ಫೈನಲ್ ಮುಖಾಮುಖಿಗೆ ಇದೆ ಅವಕಾಶ, ಮರುಕಳಿಸುತ್ತಾ 2007ರ ಇತಿಹಾಸ!

ಜಿಂಬಾಬ್ವೆಗೆ ಶರಣಾದ ಪಾಕ್‌:

ಬದ್ಧವೈರಿ ಭಾರತಕ್ಕೆ ಶರಣಾಗುವ ಮೂಲಕ ಅಭಿಯಾನ ಆರಂಭಿಸಿದ್ದ ಮಾಜಿ ಚಾಂಪಿಯನ್‌ ಪಾಕಿಸ್ತಾನಕ್ಕೆ 2ನೇ ಆಘಾತ ಎದುರಾಗಿದ್ದು ಜಿಂಬಾಬ್ವೆ ವಿರುದ್ಧ. ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ತಂಡ 1 ರನ್‌ನಿಂದ ಆಘಾತಕಾರಿ ಸೋಲು ಕಂಡಿತು. ಇದರೊಂದಿಗೆ ತಂಡ ಟೂರ್ನಿಯಿಂದಲೇ ಹೊರಬೀಳುವ ಆತಂಕಕ್ಕೆ ಗುರಿಯಾದರೂ ಬಳಿಕ ಅಚ್ಚರಿಯ ರೂಪದಲ್ಲಿ ಸೆಮೀಸ್‌ಗೆ ಲಗ್ಗೆ ಇಟ್ಟಿತು. ಜಿಂಬಾಬ್ವೆ ಕೊನೆ ಸ್ಥಾನಿಯಾಗಿಯೇ ಟೂರ್ನಿಯಲ್ಲಿ ಅಭಿಯಾನ ಕೊನೆಗೊಳಿಸಿತು.

ಆಫ್ರಿಕನ್ನರ ಭೇಟೆಯಾಡಿದ ಡಚ್‌!

ಎಷ್ಟೇ ಬಲಿಷ್ಠ ತಂಡವಾದರೂ ಅದೃಷ್ಟವಿಲ್ಲದಿದ್ದರೆ ಏನೂ ಸಾಧ್ಯವಿಲ್ಲ ಎನ್ನುವುದು ದ.ಆಫ್ರಿಕಾ ಮತ್ತೊಮ್ಮೆ ಸಾಬೀತುಪಡಿಸಿತು. ಸೂಪರ್‌-12 ಹಂತದ ಕೊನೆ ಪಂದ್ಯದಲ್ಲಿ ದ.ಆಫ್ರಿಕಾ, ನೆದರ್ಲೆಂಡ್ಸನ್ನು ಎದುರಿಸಬೇಕಿತ್ತು. ಗೆದ್ದರೆ ಸೆಮೀಸ್‌ಗೇರಬಹುದಿತ್ತು. ಆದರೆ ತಂಡದ ಅದೃಷ್ಟಚೆನ್ನಾಗಿರಲಿಲ್ಲ. 13 ರನ್‌ಗಳಿಂದ ಸೋತು ಟೂರ್ನಿಯಿಂದಲೇ ಹೊರಬಿತ್ತು. ಇದರಿಂದ ನೆದರ್ಲೆಂಡ್‌್ಸ ನಾಕೌಟ್‌ಗೇರದಿದ್ದರೂ ದ.ಆಫ್ರಿಕಾ ಮುಟ್ಟಿನೋಡುವ ರೀತಿ ಫಲಿತಾಂಶ ನೀಡಿತು.