ಯುನೈಟೆಡ್ ಅರಬ್ ಎಮಿರೇಟ್ಸ್‌ ತಂಡವನ್ನು ಮಣಿಸಿದ ನೆದರ್‌ಲ್ಯಾಂಡ್ಸ್‌ಯುಎಇ ವಿರುದ್ದ ನೆದರ್‌ಲ್ಯಾಂಡ್ಸ್‌ಗೆ 3 ವಿಕೆಟ್‌ಗಳ ರೋಚಕ ಜಯಒಂದು ಎಸೆತ ಬಾಕಿ ಇರುವಂತೆಯೇ ರೋಚಕ ಜಯ ಸಾಧಿಸಿದ ನೆದರ್‌ಲ್ಯಾಂಡ್ಸ್

ಗೀಲಾಂಗ್(ಅ.16): ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ನೆದರ್ಲ್ಯಾಂಡ್ಸ್‌ ತಂಡವು, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ ತಂಡವನ್ನು 3 ವಿಕೆಟ್‌ಗಳಿಂದ ರೋಚಕವಾಗಿ ಮಣಿಸಿ ಶುಭಾರಂಭ ಮಾಡಿದೆ. ಆರಂಭಿಕ ಬ್ಯಾಟರ್ ಮೊಹಮ್ಮದ್ ವಾಸೀಂ ದಿಟ್ಟ ಬ್ಯಾಟಿಂಗ್ ವ್ಯರ್ಥವಾಗಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಗ್ರೂಪ್ 'ಎ' ಹಂತದ ಎರಡನೇ ಪಂದ್ಯದಲ್ಲಿ ಯುನೈಟೆಡ್ ಅರಭ್ ಎಮಿರೇಟ್ಸ್‌ ತಂಡವು ನೀಡಿದ್ದ 112 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ನೆದರ್‌ಲ್ಯಾಂಡ್ಸ್‌ ತಂಡವು ಒಂದು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಯುಎಇ ವೇಗಿ ಜುನೈದ್ ಸಿದ್ದಿಕಿ ಮಾರಕ ದಾಳಿಯ ಹೊರತಾಗಿಯೂ,ಸಂಘಟಿತ ಪ್ರದರ್ಶನದ ನೆರವಿನಿಂದ ನೆದರ್‌ಲ್ಯಾಂಡ್ಸ್‌ ತಂಡವು ಕೊನೆಯ ಓವರ್‌ನ ಕೊನೆಯ ಎಸೆತ ಬಾಕಿ ಇರುವಂತೆಯೇ ರೋಚಕ ಗೆಲವು ದಾಖಲಿಸಿದೆ. ನೆದರ್‌ಲ್ಯಾಂಡ್ಸ್‌ ಪರ ಮ್ಯಾಕ್ಸ್‌ ಓಡೌಡ್‌(23, ಕಾಲಿನ್ ಅಕೆರ್‌ಮನ್(17) ಹಾಗೂ ನಾಯಕ ಸ್ಕಾಟ್ ಎಡ್ವರ್ಡ್‌ ಅಜೇಯ (16) ಬ್ಯಾಟಿಂಗ್ ನೆರವಿನಿಂದ ಭರ್ಜರಿ ಗೆಲುವು ಸಾಧಿಸಿತು. ಕೊನೆಯಲ್ಲಿ ಟಿಮ್ ಪ್ರಿಂಗಲ್‌(15) ತಂಡಕ್ಕೆ ಉಪಯುಕ್ತ ರನ್‌ ಕಾಣಿಕೆ ನೀಡಿದರು. ಈ ಗೆಲುವಿನೊಂದಿಗೆ ನೆದರ್‌ಲ್ಯಾಂಡ್ಸ್‌ ತಂಡದ ಸೂಪರ್ 12 ಪ್ರವೇಶದ ಕನಸು ಮತ್ತಷ್ಟು ಜೀವಂತವಾಗಿದೆ.

ಇನ್ನು ಯುಎಇ ಪರ ಜುನೈದ್ ಸಿದ್ದಿಕಿ 24 ರನ್ ನೀಡಿ 3 ವಿಕೆಟ್ ಪಡೆದರೆ, ಬಾಸಿಲ್ ಹಮೀದ್, ಅಯಾನ್ ಅಫ್ಜಲ್ ಖಾನ್, ಕಾರ್ತಿಕ್‌ ಮೈಯಪ್ಪನ್‌ ಹಾಗೂ ಜಹೂರ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.

Scroll to load tweet…

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಯುನೈಟೆಡ್ ಅರಬ್ ಎಮಿರೇಟ್ಸ್‌, ಬಸ್ ಡೆ ಲೀಡೆ(19/3) ಮಾರಕ ದಾಳಿಗೆ ತತ್ತರಿಸಿ ಹೋಯಿತು. ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳನ್ನು ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ದಿಟ್ಟ ಬ್ಯಾಟಿಂಗ್ ನಡೆಸಲಿಲ್ಲ. ಚಿರಾಗ್ ಸೂರಿ(12), ಮೊಹಮ್ಮದ್ ವಾಸೀಮ್(41), ಕಾಸಿಫ್ ದೌಧ್(15) ಹಾಗೂ ಅರವಿಂದ್(18) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಪರಿಣಾಮ ಯುನೈಟೆಡ್ ಅರಬ್ ಎಮಿರೇಟ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 111 ರನ್ ಗಳಿಸಲಷ್ಟೇ ಶಕ್ತವಾಯಿತು.

ನೆದರ್‌ಲ್ಯಾಂಡ್ಸ್‌ ತಂಡದ ಪರ ಬಾಸ್ ಡೆ ಲೀಡೆ 19 ರನ್ ನೀಡಿ 3 ವಿಕೆಟ್ ಪಡೆದರೆ, ಫ್ರೆಡ್‌ ಕ್ಲಾಸೇನ್‌ 2 ಹಾಗೂ ವ್ಯಾನ್ ಡರ್ ಮೆರ್ವೆ ಮತ್ತು ಟಿಮ್ ಫ್ರಿಂಗಲ್ ತಲಾ ಒಂದೊಂದು ವಿಕೆಟ್ ಪಡೆದರು.