ಐಸಿಸಿ ಫೆಬ್ರವರಿ ತಿಂಗಳ ಆಟಗಾರರ ಹೆಸರನ್ನು ನಾಮನಿರ್ದೇಶನ ಮಾಡಿದ್ದು, ರವಿಚಂದ್ರನ್‌ ಅಶ್ವಿನ್‌ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಮಾ.03): ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಆರ್‌. ಅಶ್ವಿನ್‌ ಅವರ ಹೆಸರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಪ್ರತಿ ತಿಂಗಳು ನೀಡುವ ‘ಐಸಿಸಿ ತಿಂಗಳ ಆಟಗಾರ’ ಗೌರವಕ್ಕೆ ಫೆಬ್ರವರಿ ತಿಂಗಳಿಗೆ ನಾಮ ನಿರ್ದೇಶನ ಮಾಡಲಾಗಿದೆ. 

ಅಲ್ಲದೆ, ಇಂಗ್ಲೆಂಡ್‌ ನಾಯಕ ಜೋ ರೂಟ್‌ ಮತ್ತು ವೆಸ್ಟ್‌ ಇಂಡೀಸ್‌ನ ಕ್ಲೈಯ್‌ ಮೇಯ​ರ್ಸ್ ಅವರ ಹೆಸರು ಕೂಡ ನಾಮ ನಿರ್ದೇಶನಗೊಂಡಿದೆ. ಇಂಗ್ಲೆಂಡ್‌ ವಿರುದ್ಧ ಮೊದಲ ಮೂರು ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 400 ವಿಕೆಟ್‌ ಗಡಿ ದಾಟಿದ್ದಲ್ಲದೇ, ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆಚ್ಚೆದೆಯ ಶತಕ ಸಿಡಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಟ್ಟಾರೆ ಅಶ್ವಿನ್‌ 3 ಪಂದ್ಯಗಳಲ್ಲಿ 176 ರನ್‌ ಹಾಗೂ 24 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಐಸಿಸಿ ರ‍್ಯಾಂಕಿಂಗ್‌‌: 6ನೇ ಸ್ಥಾನಕ್ಕೆ ಕುಸಿದ ಮಂದಾನ

ದುಬೈ: ಐಸಿಸಿ ಮಹಿಳಾ ಆಟಗಾರ್ತಿಯರ ಏಕದಿನ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ(732) ಬ್ಯಾಟಿಂಗ್‌ನಲ್ಲಿ 4ನೇ ರ‍್ಯಾಂಕಿಂಗ್‌ನಿಂದ 6ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌(687) 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ರಿಷಭ್ ಸಾಧನೆಗೆ ಮತ್ತೊಂದು ಗರಿ: ಐಸಿಸಿ ತಿಂಗಳ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ಪಂತ್ ಪಾಲು

ಈ ಮೂಲಕ ಅಗ್ರ 10 ಆಟಗಾರ್ತಿಯರ ಸಾಲಿನಲ್ಲಿ ಭಾರತದ ಇಬ್ಬರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಜುಲನ್‌ ಗೋಸ್ವಾಮಿ(691) 5ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಪೂನಮ್‌ ಯಾದವ್‌(679), ಶಿಖಾ ಪಾಂಡೆ(675) ಹಾಗೂ ದೀಪ್ತಿ ಶರ್ಮಾ(639) ಅಗ್ರ 10ರಲ್ಲಿ ಸ್ಥಾನ ಪಡೆದುಕೊಂಡಿರುವ ಉಳಿದ ಬೌಲರ್‌ಗಳಾಗಿದ್ದಾರೆ. 

ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಇಂಗ್ಲೆಂಡ್‌ನ ಆರಂಭಿಕ ಆಟಗಾರ್ತಿ ಟಮ್ಮಿ ಬ್ಯೂಮಾಂಟ್‌ 5 ಸ್ಥಾನಗಳ ಜಿಗಿತ ಕಂಡಿದ್ದು, ಅಗ್ರಸ್ಥಾನಕ್ಕೇರಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ(359) 4ನೇ ರ‍್ಯಾಂಕಿಂಗ್‌ ಕಾಯ್ದುಕೊಂಡಿದ್ದಾರೆ.