ಕ್ರಿಕೆಟ್ ಪ್ರೇಮಿಗಳಿಗಿನ್ನು ವಿಶ್ವಕಪ್ ಫೀವರ್..! ವಿಶ್ವಕಪ್ ಹುಟ್ಟಿನ ಗುಟ್ಟೇನು?

1983ರ ವರೆಗೂ 60 ಓವರ್‌ ಮಾದರಿಯಲ್ಲಿ ನಡೆಯುತ್ತಿದ್ದ ವಿಶ್ವಕಪ್‌, 1987ರಿಂದ 50 ಓವರ್‌ಗೆ ಇಳಿಸಲಾಯಿತು. ಇಂಗ್ಲೆಂಡ್‌ನಲ್ಲೇ ನಡೆಯುತ್ತಿದ್ದ ವಿಶ್ವಕಪ್‌, 1987ರಿಂದಾಚೆಗೆ ವಿಶ್ವದ ವಿವಿಧ ಕಡೆಗಳಿಗೂ ಹರಡಿತು. ಈವರೆಗೆ ಒಟ್ಟು 12 ಬಾರಿ ಏಕದಿನ ವಿಶ್ವಕಪ್‌ ನಡೆದಿದ್ದು, ಈ ಬಾರಿ ಟೂರ್ನಿ ಭಾರತದಲ್ಲಿ ಅ.5ರಿಂದ ನ.19ರ ವರೆಗೆ ನಡೆಯಲಿದೆ.

ICC ODI World Cup History Champions list all cricket fans need to know kvn

ಬೆಂಗಳೂರು(ಅ.01) ವಿಶ್ವದೆಲ್ಲೆಡೆ ಕ್ರೀಡಾಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಮುಂದಿನ ಒಂದೂವರೆ ತಿಂಗಳು ಕ್ರಿಕೆಟ್ ಪ್ರೇಮಿಗಳನ್ನು ಹುಚ್ಚೆದ್ದು ಕುಣಿಸಲಿರುವ, ಕುತೂಹಲ-ಕೌತುಕದ ಮೂಲಕ ಭರ್ಜರಿ ರಸದೌತಣ ಒದಗಿಸಲಿರುವ ಪುರುಷರ ಏಕದಿನ ವಿಶ್ವಕಪ್ ಇತಿಹಾಸ ಏನು? ಟೂರ್ನಿ ಶುರುವಾಗಿದ್ದು ಯಾವಾಗ? ಎಂಬುವುದರ ಜತೆಗೆ ಈವರೆಗಿನ 12 ವಿಶ್ವಕಪ್‌ಗಳ ಚಿತ್ರಣ ಇಲ್ಲಿದೆ ನೋಡಿ.

ವಿಶ್ವಕಪ್ ಹುಟ್ಟಿನ ಗುಟ್ಟೇನು?

ಜಾಗತಿಕ ಮಟ್ಟದ ಪ್ರಮುಖ ಕ್ರೀಡೆಗಳಲ್ಲಿ ಒಂದಾದ ಕ್ರಿಕೆಟ್‌ನಲ್ಲಿ ವಿಶ್ವಕಪ್‌ ಎಂದರೆ ಹಬ್ಬ. ಕ್ರಿಕೆಟ್‌ ಎಂದರೆ ಟೆಸ್ಟ್ ಎಂಬಂತಿದ್ದ 1960ರ ದಶಕದಲ್ಲಿ ಕಡಿಮೆ ಅವಧಿಯಲ್ಲಿ ನಡೆಯುವ ಒಂದೇ ದಿನದ ಪಂದ್ಯಗಳು ಇಂಗ್ಲೆಂಡ್‌ನಲ್ಲಿ ಜನಪ್ರಿಯತೆ ಗಳಿಸಲಾರಂಭಿಸಿತು. ವಿಶ್ವದ ಇತರ ಭಾಗಗಳಲ್ಲೂ ಏಕದಿನ ಕ್ರಿಕೆಟ್‌ ಯಶಸ್ಸು ಸಾಧಿಸಿ, ಜನಪ್ರಿಯತೆ ಹೆಚ್ಚಾಗುತ್ತಿದ್ದ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯು ಏಕದಿನ ವಿಶ್ವಕಪ್‌ಗೆ ಮುಹೂರ್ತ ನಿಗದಿಪಡಿಸಿತು. ಅದರಂತೆ 1975ರಲ್ಲಿ ಚೊಚ್ಚಲ ಬಾರಿ ಇಂಗ್ಲೆಂಡ್‌ನ ಮಣ್ಣಲ್ಲಿ ಏಕದಿನ ವಿಶ್ವಕಪ್‌ ಆಡಿಸಲಾಯಿತು.

World Cup 2023 ಭಾರತ-ಪಾಕ್ ಅಲ್ಲವೇ ಅಲ್ಲ, ಈ ತಂಡ ವಿಶ್ವಕಪ್ ಗೆಲ್ಲುವ ಫೇವರೇಟ್ ಎಂದ ಸನ್ನಿ..!

1983ರ ವರೆಗೂ 60 ಓವರ್‌ ಮಾದರಿಯಲ್ಲಿ ನಡೆಯುತ್ತಿದ್ದ ವಿಶ್ವಕಪ್‌, 1987ರಿಂದ 50 ಓವರ್‌ಗೆ ಇಳಿಸಲಾಯಿತು. ಇಂಗ್ಲೆಂಡ್‌ನಲ್ಲೇ ನಡೆಯುತ್ತಿದ್ದ ವಿಶ್ವಕಪ್‌, 1987ರಿಂದಾಚೆಗೆ ವಿಶ್ವದ ವಿವಿಧ ಕಡೆಗಳಿಗೂ ಹರಡಿತು. ಈವರೆಗೆ ಒಟ್ಟು 12 ಬಾರಿ ಏಕದಿನ ವಿಶ್ವಕಪ್‌ ನಡೆದಿದ್ದು, ಈ ಬಾರಿ ಟೂರ್ನಿ ಭಾರತದಲ್ಲಿ ಅ.5ರಿಂದ ನ.19ರ ವರೆಗೆ ನಡೆಯಲಿದೆ.

ಇದು ವರೆಗೂ ನಡೆದಿರುವ 12 ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ ಗರಿಷ್ಠ ಅಂದರೆ 5 ಬಾರಿ ಚಾಂಪಿಯನ್‌ ಆಗಿದೆ. ವೆಸ್ಟ್‌ಇಂಡೀಸ್‌, ಭಾರತ ತಲಾ 2 ಬಾರಿ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಇಂಗ್ಲೆಂಡ್‌ ತಲಾ ಒಮ್ಮೆ ಗೆದ್ದಿವೆ. ಯಾವ್ಯಾವ ವರ್ಷ ಯಾರ್‍ಯಾರಿಗೆ ಟ್ರೋಫಿ ಒಲಿಯಿತು ಎನ್ನುವುದನ್ನು ಮೆಲುಕು ಹಾಕೋಣ.

1975 ಚಾಂಪಿಯನ್‌: ವೆಸ್ಟ್‌ಇಂಡೀಸ್‌

ಚೊಚ್ಚಲ ಆವೃತ್ತಿ ಏಕದಿನ ವಿಶ್ವಕಪ್‌ ನಡೆದಿದ್ದು 1975ರಲ್ಲಿ ಇಂಗ್ಲೆಂಡ್‌ನಲ್ಲಿ. ಭಾರತ ಸೇರಿ ಒಟ್ಟು 8 ತಂಡಗಳು 60 ಓವರ್‌ ಮಾದರಿಯ ಟೂರ್ನಿಯಲ್ಲಿ ಆಡಿದ್ದವು. ಒಟ್ಟು 15 ಪಂದ್ಯ ನಡೆದಿತ್ತು. ಫೈನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ವೆಸ್ಟ್‌ಇಂಡೀಸ್‌ ಚಾಂಪಿಯನ್‌ ಆಗಿತ್ತು.

1979 ಚಾಂಪಿಯನ್‌: ವೆಸ್ಟ್‌ಇಂಡೀಸ್‌

1979ರ ವಿಶ್ವಕಪ್‌ ಟೂರ್ನಿಯೂ ಇಂಗ್ಲೆಂಡ್‌ನಲ್ಲೇ ನಡೆಯಿತು. ಈ ಬಾರಿಯೂ 8 ತಂಡಗಳು ಆಡಿದ್ದವು. ಒಟ್ಟು 15 ಪಂದ್ಯಗಳು ನಡೆದಿದ್ದವು. ಫೈನಲಲ್ಲಿ ಇಂಗ್ಲೆಂಡ್‌ಗೆ ಸೋಲುಣಿಸಿ ವಿಂಡೀಸ್‌ 2ನೇ ಬಾರಿ ಟ್ರೋಫಿ ಎತ್ತಿಹಿಡಿದಿತ್ತು.

1983 ಚಾಂಪಿಯನ್‌: ಭಾರತ

1983ರ ವಿಶ್ವಕಪ್‌ ವಿಶ್ವ ಕ್ರಿಕೆಟ್‌ನಲ್ಲಿ ಅದರಲ್ಲೂ ಭಾರತದ ಕ್ರೀಡೆಯ ದಿಕ್ಕನ್ನು ಶಾಶ್ವತವಾಗಿ ಬದಲಾಯಿಸಿದ ಟೂರ್ನಿ. ಆ ವರ್ಷವೂ ಅಂದರೆ ಸತತ 3ನೇ ಬಾರಿಯೂ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದು ಇಂಗ್ಲೆಂಡ್‌. ಪಾಲ್ಗೊಂಡ ತಂಡಗಳ ಸಂಖ್ಯೆ ಎಂಟೇ ಆಗಿದ್ದರೂ ಪಂದ್ಯಗಳ ಸಂಖ್ಯೆ ಏರಿಕೆಯಾಯಿತು. ಮೊದಲೆರಡು ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ತೋರಿದ್ದ ಭಾರತ ಈ ಬಾರಿಯೂ ಗುಂಪು ಹಂತದಲ್ಲೇ ಹೊರಬೀಳುವ ತಂಡ ಎಂದೇ ಬಿಂಬಿತವಾಗಿತ್ತು. ಆದರೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ ಕಪಿಲ್‌ ದೇವ್‌ ನಾಯಕತ್ವದ ಭಾರತ ಚಾಂಪಿಯನ್‌ ಎನಿಸಿಕೊಂಡಿತು. ಸೋಲೇ ಇಲ್ಲ ಎಂಬಂತಿದ್ದ ಬಲಿಷ್ಠ ವಿಂಡೀಸ್‌ ತಂಡವನ್ನು ಫೈನಲ್‌ನಲ್ಲಿ 43 ರನ್‌ಗಳಿಂದ ಸೋಲಿಸಿದ ಭಾರತ, ಚೊಚ್ಚಲ ಬಾರಿ ವಿಶ್ವಕಪ್‌ ಎತ್ತಿಹಿಡಿಯಿತು.

ಅಕ್ಷರ್ ಪಟೇಲ್ ಸ್ಥಾನಕ್ಕೆ ಅಶ್ವಿನ್ ಬದಲಿಗೆ ಈ ಆಟಗಾರನಿಗೆ ಸ್ಥಾನ ನೀಡಬೇಕಿತ್ತು ಎಂದ ವಿಶ್ವಕಪ್ ಹೀರೋ ಯುವಿ..!

1987 ಚಾಂಪಿಯನ್‌: ಆಸ್ಟ್ರೇಲಿಯಾ

1987ರ ವಿಶ್ವಕಪ್‌ ಹಲವು ಬದಲಾವಣೆಗಳಿಗೆ ಸಾಕ್ಷಿಯಾಯಿತು. ಮೊದಲ ಬಾರಿ ಇಂಗ್ಲೆಂಡ್‌ನ ಹೊರಗಡೆ ಟೂರ್ನಿ ನಡೆಯಿತು. ಭಾರತ- ಪಾಕಿಸ್ತಾನ ಜಂಟಿ ಆತಿಥ್ಯ ವಹಿಸಿದ್ದವು. ಪಂದ್ಯವನ್ನು 50 ಓವರ್‌ಗೆ ಇಳಿಸಲಾಯಿತು. 8 ತಂಡಗಳು ಪಾಲ್ಗೊಂಡವು. ಫೈನಲ್‌ನಲ್ಲಿ ಇಂಗ್ಲೆಂಡನ್ನು ಮಣಿಸಿ ಆಸ್ಟ್ರೇಲಿಯಾ ಪ್ರಶಸ್ತಿ ಗೆದ್ದಿತು.

1992 ಚಾಂಪಿಯನ್‌: ಪಾಕಿಸ್ತಾನ

1992ರ ವಿಶ್ವಕಪ್‌ನಲ್ಲಿ ಮತ್ತಷ್ಟು ಬದಲಾವಣೆಗಳಾದವು. ಮೊದಲ ಬಾರಿಗೆ ಆಟಗಾರರು ಬಣ್ಣ ಬಣ್ಣದ ಜೆರ್ಸಿಗಳನ್ನು ತೊಟ್ಟರು. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ನಡೆದ ಟೂರ್ನಿಯಲ್ಲಿ 9 ತಂಡಗಳು ಪಾಲ್ಗೊಂಡವು. ಪಾಕಿಸ್ತಾನ ಚೊಚ್ಚಲ ಟ್ರೋಫಿ ಗೆದ್ದರೆ, ಇಂಗ್ಲೆಂಡ್‌ 3ನೇ ಬಾರಿ ರನ್ನರ್‌-ಅಪ್‌ ಆಯಿತು.

1996 ಚಾಂಪಿಯನ್‌: ಶ್ರೀಲಂಕಾ

ಭಾರತ, ಪಾಕಿಸ್ತಾನ, ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿದವು. ತಂಡಗಳ ಸಂಖ್ಯೆ 12ಕ್ಕೆ ಏರಿಕೆಯಾಯಿತು. 3ನೇ ಬಾರಿ ಫೈನಲ್‌ ಪ್ರವೇಶಿಸಿದ್ದ ಆಸ್ಟ್ರೇಲಿಯಾವನ್ನು ಸೋಲಿಸಿ, ಅರ್ಜುನ ರಣತುಂಗಾ ನೇತೃತ್ವದ ಶ್ರೀಲಂಕಾ ತಂಡ ಚೊಚ್ಚಲ ವಿಶ್ವಕಪ್‌ ಜಯಿಸಿತು.

1999 ಚಾಂಪಿಯನ್‌: ಆಸ್ಟ್ರೇಲಿಯಾ

1999ರ ವಿಶ್ವಕಪ್‌ ಇಂಗ್ಲೆಂಡ್‌ನಲ್ಲಿ ನಡೆಯಿತು. ಸ್ಕಾಟ್ಲೆಂಡ್‌, ಐರ್ಲೆಂಡ್‌, ವೇಲ್ಸ್‌, ನೆದರ್‌ಲೆಂಡ್ಸ್‌ನಲ್ಲಿಯೂ ಕೆಲ ಪಂದ್ಯಗಳನ್ನು ಆಯೋಜಿಸಲಾಯಿತು. 12 ತಂಡಗಳು ಪಾಲ್ಗೊಂಡವು. 2ನೇ ಕಪ್‌ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಫೈನಲ್‌ನಲ್ಲಿ ಸೋಲು ಎದುರಾಯಿತು. ಆಸ್ಟ್ರೇಲಿಯಾ 2ನೇ ಬಾರಿ ಚಾಂಪಿಯನ್‌ ಆಯಿತು.

2003 ಚಾಂಪಿಯನ್‌: ಆಸ್ಟ್ರೇಲಿಯಾ

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೀನ್ಯಾ ಆತಿಥ್ಯದಲ್ಲಿ 2003ರ ವಿಶ್ವಕಪ್‌ ನಡೆಯಿತು. ತಂಡಗಳು ಸಂಖ್ಯೆ 12ರಿಂದ 14ಕ್ಕೆ ಏರಿಕೆಯಾಯಿತು. ಅಭೂತಪೂರ್ವ ಪ್ರದರ್ಶನ ತೋರಿದ್ದ ಭಾರತ ಫೈನಲ್‌ಗೇರಿತು. ಆದರೆ 2ನೇ ಬಾರಿ ವಿಶ್ವಕಪ್‌ ಗೆಲ್ಲುವ ಕನಸು ನನಸಾಗಲಿಲ್ಲ. 125 ರನ್‌ಗಳಿಂದ ಗೆದ್ದ ಆಸ್ಟ್ರೇಲಿಯಾ, ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು.

2007 ಚಾಂಪಿಯನ್‌: ಆಸ್ಟ್ರೇಲಿಯಾ

2007ರ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದು ವೆಸ್ಟ್‌ಇಂಡೀಸ್‌. ಈವರೆಗಿನ ಗರಿಷ್ಠ ಅಂದರೆ 16 ತಂಡಗಳು ಈ ಬಾರಿ ವಿಶ್ವಕಪ್‌ನಲ್ಲಿ ಪಾಲ್ಗೊಂಡವು. ಭಾರತ ಗುಂಪು ಹಂತದಲ್ಲೇ ಹೊರಬಿತ್ತು. ಶ್ರೀಲಂಕಾ ವಿರುದ್ಧ ಫೈನಲ್‌ನಲ್ಲಿ ಗೆದ್ದ ಆಸ್ಟ್ರೇಲಿಯಾ, ಹ್ಯಾಟ್ರಿಕ್‌ ಹಾಗೂ ಒಟ್ಟಾರೆ 4ನೇ ಬಾರಿ ವಿಶ್ವಕಪ್‌ಗೆ ಮುತ್ತಿಟ್ಟಿತು.

2011 ಚಾಂಪಿಯನ್‌: ಭಾರತ

2011ರ ವಿಶ್ವಕಪ್‌ ಕೋಟ್ಯಂತರ ಭಾರತೀಯರ ಹೃದಯದಲ್ಲಿ ಎಂದಿಗೂ ಅಜರಾಮರ. ತವರಿನ ಅಭಿಮಾನಿಗಳ ಥ್ರಿಲ್‌, ಸಚಿನ್‌ರ ವಿಶ್ವಕಪ್‌ ಕನಸು, ಧೋನಿಯ ಗೆಲುವಿನ ಸಿಕ್ಸರ್‌ ಯಾವುದೂ ಕ್ರೀಡಾಭಿಮಾನಿಗಳ ಮನದಿಂದ ಮಾಯದು. ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಿದ್ದ ಆ ಟೂರ್ನಿಯಲ್ಲಿ 14 ತಂಡಗಳು ಪಾಲ್ಗೊಂಡವು. 28 ವರ್ಷಗಳಿಂದ ವಿಶ್ವಕಪ್‌ಗಾಗಿ ಕಾಯುತ್ತಿದ್ದ ಭಾರತ ಎಂ.ಎಸ್‌.ಧೋನಿ ನಾಯಕತ್ವದಲ್ಲಿ ತವರಿನಲ್ಲೇ ಪ್ರಶಸ್ತಿ ಎತ್ತಿಹಿಡಿಯಿತು. ಏ.2ರಂದು ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಭಾರತ, ತವರಿನಲ್ಲಿ ವಿಶ್ವಕಪ್‌ ಗೆದ್ದ ಮೊದಲ ದೇಶ ಎನಿಸಿಕೊಂಡಿತು.

2015 ಚಾಂಪಿಯನ್‌: ಆಸ್ಟ್ರೇಲಿಯಾ

1992ರ ಬಳಿಕ ಮತ್ತೊಮ್ಮೆ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಜಂಟಿಯಾಗಿ ಆತಿಥ್ಯ ವಹಿಸಿದವು. 14 ತಂಡ ಪಾಲ್ಗೊಂಡ ಟೂರ್ನಿಯಲ್ಲಿ ಒಟ್ಟು 49 ಪಂದ್ಯಗಳು ನಡೆದವು. ಹಾಲಿ ಚಾಂಪಿಯನ್‌ ಭಾರತಕ್ಕೆ ಸೆಮಿಫೈನಲ್‌ನಿಂದ ಮುಂದೆ ಸಾಗಲು ಆಗಲಿಲ್ಲ. ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಗೆದ್ದ ಆಸ್ಟ್ರೇಲಿಯಾ, 5ನೇ ಬಾರಿ ಚಾಂಪಿಯನ್‌ ಎನಿಸಿಕೊಂಡಿತು.

2019 ಚಾಂಪಿಯನ್‌: ಇಂಗ್ಲೆಂಡ್‌

ಕ್ರಿಕೆಟ್‌ ಜನಕ ಇಂಗ್ಲೆಂಡ್‌ಗೆ ಹಲವು ದಶಕಗಳ ಬಳಿಕ ಟ್ರೋಫಿ ತಂದುಕೊಟ್ಟ ವಿಶ್ವಕಪ್‌. 2019ರ ಟೂರ್ನಿಗೆ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಜಂಟಿ ಆತಿಥ್ಯ ವಹಿಸಿದ್ದವು. ಪಾಲ್ಗೊಳ್ಳುವ ತಂಡಗಳ ಸಂಖ್ಯೆ 10ಕ್ಕೆ ಇಳಿಕೆಯಾಯಿತು. ನ್ಯೂಜಿಲೆಂಡ್‌ ಸತತ 2ನೇ ಬಾರಿ ಫೈನಲ್‌ಗೇರಿದರೂ, ಇಂಗ್ಲೆಂಡ್‌ ತನ್ನ 4ನೇ ಪ್ರಯತ್ನದಲ್ಲಿ ಮೊದಲ ಬಾರಿ ಚಾಂಪಿಯನ್‌ ಎನಿಸಿಕೊಂಡಿತು.

Latest Videos
Follow Us:
Download App:
  • android
  • ios