ಪಂಜಾಬ್ ಕಿಂಗ್ಸ್ ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ವರ್ಷದ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಮೆಲ್ಬೊರ್ನ್: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಏಕದಿನ ಮಾದರಿಗೆ ವಿದಾಯ ಘೋಷಿಸಿದ್ದಾರೆ. ಮುಂದಿನ ವರ್ಷ ಭಾರತ ಹಾಗೂ ಶ್ರೀಲಂಕಾದಲ್ಲಿ ಜಂಟಿಯಾಗಿ ಆಯೋಜನೆಗೊಳ್ಳಲಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಮ್ಯಾಕ್ಸಿ ತಿಳಿಸಿದ್ದಾರೆ.
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಪಂಜಾಬ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಟೂರ್ನಿಯಲ್ಲಿ ಮ್ಯಾಕ್ಸಿ ನಿರೀಕ್ಷಿತ ಪ್ರದರ್ಶನ ತೋರಲು ಯಶಸ್ವಿಯಾಗಿರಲಿಲ್ಲ. ಇದರ ನಡುವೆ ಟೂರ್ನಿಯ ಮಧ್ಯದಲ್ಲೇ ಕೈಬೆರಳಿನ ಗಾಯಕ್ಕೆ ತುತ್ತಾಗಿ ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದರು.
ಆಸ್ಟ್ರೇಲಿಯಾ ಪರ 149 ಏಕದಿನ ಪಂದ್ಯಗಳನ್ನಾಡಿರುವ ಅನುಭವಿ ಆಟಗಾರ ಮ್ಯಾಕ್ಸ್‌ವೆಲ್, 3990 ರನ್ ಸಿಡಿಸಿದ್ದಾರೆ. ಇದಷ್ಟೇ ಅಲ್ಲದೇ ಉಪಯುಕ್ತ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದ ಮ್ಯಾಕ್ಸಿ, ಏಕದಿನ ಕ್ರಿಕೆಟ್‌ನಲ್ಲಿ 77 ವಿಕೆಟ್ ಕಬಳಿಸಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ದಾರೆ. ಈ ಪೈಕಿ 2023ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ವಿರುದ್ದ ಆಡಿದ ಮ್ಯಾಕ್ಸ್‌ವೆಲ್ ಇನ್ನಿಂಗ್ಸ್ ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವೇ ಇಲ್ಲ. ಆಫ್ಘಾನಿಸ್ತಾನ ನೀಡಿದ್ದ ಬೃಹತ್ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡವು ಒಂದು ಹಂತದಲ್ಲಿ 91 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖಮಾಡಿತ್ತು. ಈ ವೇಳೆ ಕ್ರೀಸ್‌ಗಿಳಿದ ಮ್ಯಾಕ್ಸ್‌ವೆಲ್ ಕೇವಲ 128 ಎಸೆತಗಳನ್ನು ಎದುರಿಸಿ ಅಜೇಯ 201 ರನ್ ಸಿಡಿಸುವ ಮೂಲಕ ರೋಚಕವಾಗಿ ಕಾಂಗರೂ ಪಡೆಗೆ ಗೆಲುವು ತಂದುಕೊಟ್ಟಿದ್ದರು. ಇದಾದ ನಂತರ ಆಸ್ಟ್ರೇಲಿಯಾ ತಂಡವು, ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ಆತಿಥೇಯ ಟೀಂ ಇಂಡಿಯಾವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
2026ರಲ್ಲಿ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಬಿಗ್ ಬ್ಯಾಷ್ ಲೀಗ್ ಹಾಗೂ ಇನ್ನಿತರ ಜಾಗತಿಕ ಟಿ20 ಲೀಗ್ ಗಮನದಲ್ಲಿಟ್ಟುಕೊಂಡು ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್ ಮಾದರಿಗೆ ನಿವೃತ್ತಿ ತೆಗೆದುಕೊಂಡಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್‌ನಲ್ಲಿ 126ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸುವ ಮೂಲಕ ಅತಿಹೆಚ್ಚು ಸ್ಟ್ರೈಕ್‌ರೇಟ್ ಹೊಂದಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟರ್ ಆಂಡ್ರೆ ರಸೆಲ್ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್‌ನಲ್ಲಿ ಒಂದು ದ್ವಿಶತಕ ಸೇರಿದಂತೆ 4 ಶತಕ ಹಾಗೂ 23 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮ್ಯಾಕ್ಸ್‌ವೆಲ್ ಅವಿಸ್ಮರಣೀಯ ಇನ್ನಿಂಗ್ಸ್‌ಗಳನ್ನಾಡಿದ್ದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯವರೆಗೆ ಫಿಟ್ನೆಸ್ ಕಾಯ್ದುಕೊಳ್ಳುವುದು ಕಷ್ಟಸಾಧ್ಯ ಎನ್ನುವ ಉದ್ದೇಶದಿಂದ ಮ್ಯಾಕ್ಸ್‌ವೆಲ್ ಈ ನಿರ್ಧಾರ ಕೈಗೊಂಡಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭಕ್ಕೂ ಮುನ್ನ ಆಸೀಸ್ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ದಿಢೀರ್ ಎನ್ನುವಂತೆ ಏಕದಿಕ ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಿದ್ದರು. ಇದೀಗ ಮ್ಯಾಕ್ಸ್‌ವೆಲ್ ಕೂಡಾ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ ಈ ಇಬ್ಬರು ಸ್ಟಾರ್ ಆಟಗಾರರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
