ಭಾರತದ ಮಾಜಿ ನಾಯಕ ಕಪಿಲ್ ದೇವ್ ಕಿಡ್ನಾಪ್, ಗಂಭೀರ್ ಹಂಚಿದ ವಿಡಿಯೋ ಅಸಲಿಯತ್ತೇನು?
ಟೀಂ ಇಂಡಿಯಾಗೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಅಪಹರಣವಾಗಿದೆಯಾ? ಸಾಮಾಜಿಕ ಮಾಧ್ಯಮಗಳಲ್ಲಿ ಕಪಿಲ್ ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದ ಅಸಲಿಯತ್ತೇನು?
ನವದೆಹಲಿ(ಸೆ.25) ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋ ಹಲವು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಟೀಂ ಇಂಡಿಯಾ ಮಾಜಿ ನಾಯಕ, ಭಾರತಕ್ಕೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಕಪಿಲ್ ದೇವ್ ಅವರ ಅಪಹರಣವಾಗಿದೆಯಾ? ಅನ್ನೋ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಪಿಲ್ ದೇವ್ ಕೈಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ಹಂಚಿಕೊಂಡಿರುವ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ , ಆತಂಕ ಹೊರಹಾಕಿದ್ದಾರೆ. ಇದು ಕಪಿಲ್ ಪಾಜಿ ಅಲ್ಲಾ ಎಂದು ಭಾವಿಸುವೆ, ಇಷ್ಟೇ ಅಲ್ಲ ಕಪಿಲ್ ಚೆನ್ನಾಗಿದ್ದಾರೆ ಎಂದುಕೊಂಡಿದ್ದೇನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ಈ ಕಿಡ್ನಾಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ವಿಡಿಯೋದಲ್ಲಿರುವುದು ಕಪಿಲ್ ದೇವ್ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಇದು ಚಿತ್ರೀಕರಣ ಒಂದು ತುಣುಕು. ಕಪಿಲ್ ದೇವ್ ಅವರನ್ನು ಅಪಹರಣ ಮಾಡುತ್ತಿರುವ ದೃಶ್ಯ ಇದಾಗಿದೆ. ಚಿತ್ರ ಅಥವಾ ಜಾಹೀರಾತಿಗಾಗಿ ಈ ವಿಡಿಯೋ ಶೂಟ್ ಮಾಡಲಾಗಿದೆ. ಆದರೆ ಈ ಸಣ್ಣ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
'ಎಂತ ಹೊಡೆತ..!': ಗಿಲ್ ಬ್ಯಾಟಿಂಗ್‌ಗೆ ತೆಂಡುಲ್ಕರ್ ಪುತ್ರಿ ಸಾರಾ ದಿಲ್ ಖುಷ್..!
ಈ ವಿಡಿಯೋದಲ್ಲಿ ಇಬ್ಬರು ಕಪಿಲ್ ದೇವ್ ಅವರ ಕೈಗಳನ್ನು ಹಿಂಭಾಗಕ್ಕೆ ಕಟ್ಟಿದ್ದಾರೆ. ದಾರದಿಂದ ಕೈಗಳನ್ನು ಬಿಗಿಯಾಗಿ ಕಟ್ಟಲಾಗಿದೆ. ಇನ್ನು ಕಪಿಲ್ ದೇವ್ ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಲಾಗಿದೆ. ಬಳಿಕ ಇಬ್ಬರು ಕಪಿಲ್ ದೇವ್ ಅವರನ್ನು ಎಳೆದುಕೊಂಡು ಸಾಗುತ್ತಿರುವ ದೃಶ್ಯವಿದೆ. ಈ ವೇಳೆ ಕಪಿಲ್ ದೇವ್ ಸಹಾಯಕ್ಕಾಗಿ ಹಿಂತಿರುಗಿ ನೋಡುವ ದೃಶ್ಯವೂ ಇದೆ.
ಈ ಅಪಹರಣ ದೃಶ್ಯವನ್ನು ಚಿತ್ರ ತಂಡ ಅಥವಾ ಜಾಹೀರಾತು ತಂಡ ಉದ್ದೇಶಪೂರ್ವಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿರುವ ಸಾಧ್ಯತೆ ಇದೆ. ಕಪಿಲ್ ಅಪಹರಣ ಕುರಿತು ಭಾರಿ ಪ್ರಚಾರ ಪಡೆಯಲು ಈ ರೀತಿ ಮಾಡಿರುವ ಸಾಧ್ಯತೆ ಹೆಚ್ಚು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಹಾಗೂ ಭಿನ್ನ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತದೆ. ಇದರ ಭಾಗವಾಗಿ ಈ ಕಸರತ್ತು ನಡೆಸಿರುವ ಸಾಧ್ಯತೆ ಇದೆ.
Asian Games 2023: ಚೀನಾದಲ್ಲಿ ಲಂಕಾ ದಹನ, ಚಿನ್ನ ಗೆದ್ದು ಬೀಗಿದ ಮಹಿಳಾ ಟೀಂ ಇಂಡಿಯಾ
ಗೌತಮ್ ಗಂಭೀರ್ ಈ ವಿಡಿಯೋ ಹಂಚಿಕೊಂಡು, ಬೇರೆ ಯಾರಿಗಾದರೂ ಈ ವಿಡಿಯೋ ಸಿಕ್ಕಿದೆಯಾ? ಇದು ಕಪಿಲ್ ಪಾಜಿ ಎಲ್ಲ ಎಂದು ಭಾವಿಸುತ್ತೇನೆ. ಅವರು ಚೆನ್ನಾಗಿದ್ದಾರೆ ಎಂದುಕೊಂಡಿದ್ದೇನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.