2026ರ ಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಲೇಖನವು ಚಾಂಪಿಯನ್ ಮತ್ತು ರನ್ನರ್-ಅಪ್ ತಂಡಗಳಿಗೆ ಸಿಕ್ಕ ಬಹುಮಾನದ ಮೊತ್ತ ಹಾಗೂ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಸೇರಿದಂತೆ ಇತರ ವೈಯಕ್ತಿಕ ಪ್ರಶಸ್ತಿ ವಿಜೇತರ ಸಂಪೂರ್ಣ ವಿವರಗಳನ್ನು ನೀಡುತ್ತದೆ.
IPL prize money 2026: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ಎದುರು ಆರ್‌ಸಿಬಿ ತಂಡವು ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಬೆಂಗಳೂರು ತಂಡ ಯಶಸ್ವಿಯಾಗಿದೆ.
ಫೈನಲ್‌ನಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನಕ್ಕೆ ಈ ಐಪಿಎಲ್ ಟ್ರೋಫಿ ಒಲಿದಿದೆ. ಮೊದಲಿಗೆ ಟಾಸ್ ಗೆದ್ದ ಆರ್‌ಸಿಬಿ ತಂಡವು, ಎದುರಾಳಿ ಗುಜರಾತ್ ತಂಡವನ್ನು 20 ಓವರ್‌ಗಳಲ್ಲಿ ಕೇವಲ 155 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಇನ್ನು ಗುರಿ ಬೆನ್ನತ್ತಿದ ಆರ್‌ಸಿಬಿ ಇನ್ನೂ ಎರಡು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಆರ್‌ಸಿಬಿ ರನ್ ಮಷೀನ್ ವಿರಾಟ್ ಕೊಹ್ಲಿ ಅಜೇಯ ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಇನ್ನು ಐಪಿಎಲ್ ಫೈನಲ್ ಪಂದ್ಯ ಮುಕ್ತಾಯದ ಬಳಿಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಾವೆಲ್ಲಾ ಆಟಗಾರರು ಯಾವ ಬಹುಮಾನ ಪಡೆದರು. ಟಾಟಾ ಸಿಯಾರ ಕಾರು ಯಾರ ಪಾಲಾಯಿತು? ಚಾಂಪಿಯನ್ ಹಾಗೂ ರನ್ನರ್ಸ್ ತಂಡಕ್ಕೆ ಸಿಕ್ಕ ನಗದು ಬಹುಮಾನ ಎಷ್ಟು ಎಲ್ಲವನ್ನು ನೋಡೋಣ ಬನ್ನಿ.
45 ಲಕ್ಷ ರುಪಾಯಿ ನಗದು, ಟಾಟಾ ಸಿಯಾರ ಕಾರು ಗೆದ್ದ ವೈಭವ್ ಸೂರ್ಯವಂಶಿ
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವೈಯುಕ್ತಿಕ ಪ್ರದರ್ಶನವನ್ನು ಗಮನಿಸಿದರೆ, 15 ವರ್ಷದ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ವೈಭವ್ ಸುರ್ಯವಂಶಿ ಹಲವು ಪ್ರಶಸ್ತಿಗಳನ್ನು ಲೂಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಟೂರ್ನಿಯಲ್ಲಿ ಗರಿಷ್ಠ ರನ್(776) ರನ್ ಗಳಿಸಿದ್ದಕ್ಕಾಗಿ ಆರೆಂಜ್ ಕ್ಯಾಪ್, ಸೂಪರ್ ಸ್ಟ್ರೈಕರ್ ಆಫ್ ದಿ ಟೂರ್ನಮೆಂಟ್(237.31)ಗಾಗಿ ಟಾಟಾ ಸಿಯಾರ ಕಾರು ಸೇರಿದಂತೆ 45 ಲಕ್ಷ ರುಪಾಯಿ ತಮ್ಮದಾಗಿಸಿಕೊಂಡರು.
2026ರ ಐಪಿಎಲ್ ಟೂರ್ನಿಯ ಬಹುಮಾನಗಳ ಕಂಪ್ಲೀಟ್ ಡೀಟೈಲ್ಸ್ ಹೀಗಿದೆ:
ಚಾಂಪಿಯನ್ಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು: ₹20 ಕೋಟಿ
ರನ್ನರ್ಸ್-ಅಪ್: ಗುಜರಾತ್ ಟೈಟಾನ್ಸ್ : ₹12.5 ಕೋಟಿ
ಕ್ವಾಲಿಫೈಯರ್-2 ಸೋತ ತಂಡ: ರಾಜಸ್ಥಾನ ರಾಯಲ್ಸ್: ₹7 ಕೋಟಿ
ಎಲಿಮಿನೇಟರ್‌ನಲ್ಲಿ ಸೋತ ತಂಡ: ಸನ್‌ರೈಸರ್ಸ್ ಹೈದರಾಬಾದ್: ₹6.5 ಕೋಟಿ
ಆರೆಂಜ್ ಕ್ಯಾಪ್(ಗರಿಷ್ಠ ರನ್ 776): ವೈಭವ್ ಸೂರ್ಯವಂಶಿ(ರಾಜಸ್ಥಾನ ರಾಯಲ್ಸ್): ₹10 ಲಕ್ಷ
ಪರ್ಪಲ್ ಕ್ಯಾಪ್(ಗರಿಷ್ಠ ವಿಕೆಟ್ 29): ಕಗಿಸೋ ರಬಾಡ(ಗುಜರಾತ್ ಟೈಟಾನ್ಸ್): ₹10 ಲಕ್ಷ
ಅತ್ಯಂತ ಮೌಲ್ಯಯುತ ಕ್ರಿಕೆಟಿಗ: ವೈಭವ್ ಸೂರ್ಯವಂಶಿ(ರಾಜಸ್ಥಾನ ರಾಯಲ್ಸ್): ₹15 ಲಕ್ಷ
ಸೂಪರ್ ಸ್ಟ್ರೈಕರ್ ಆಫ್ ದಿ ಟೂರ್ನಮೆಂಟ್: ವೈಭವ್ ಸೂರ್ಯವಂಶಿ(237.31)(ರಾಜಸ್ಥಾನ ರಾಯಲ್ಸ್): ಟಾಟಾ ಸಿಯಾರ ಕಾರು
ಮೋಸ್ಟ್ ಡಾಟ್ ಬಾಲ್ಸ್ : ಮೊಹಮ್ಮದ್ ಸಿರಾಜ್ (172)(ಗುಜರಾತ್ ಟೈಟಾನ್ಸ): ₹10 ಲಕ್ಷ
ಎಮರ್ಜಿಂಗ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್: ವೈಭವ್ ಸೂರ್ಯವಂಶಿ(ರಾಜಸ್ಥಾನ ರಾಯಲ್ಸ್): ₹10 ಲಕ್ಷ
ಫ್ಯಾಂಟಸಿ ಕಿಂಗ್: ಸಾಯಿ ಸುದರ್ಶನ್(ಗುಜರಾತ್ ಟೈಟಾನ್ಸ್): ₹10 ಲಕ್ಷ
ಸೂಪರ್ ಸಿಕ್ಸ್ ಆಫ್ ದಿ ಸೀಸನ್: ವೈಭವ್ ಸೂರ್ಯವಂಶಿ(71)(ರಾಜಸ್ಥಾನ ರಾಯಲ್ಸ್): ₹10 ಲಕ್ಷ
ಸೂಪರ್ ಫೋರ್ಸ್ ಆಫ್ ದಿ ಸೀಸನ್: ಸಾಯಿ ಸುದರ್ಶನ್(75)(ಗುಜರಾತ್ ಟೈಟಾನ್ಸ್): ₹10 ಲಕ್ಷ
ಕ್ಯಾಚ್ ಆಫ್ ದಿ ಸೀಸನ್: ಮನೀಶ್ ಪಾಂಡೆ(ಕೋಲ್ಕತಾ ನೈಟ್ ರೈಡರ್ಸ್): ₹10 ಲಕ್ಷ
ಫೇರ್ ಪ್ಲೇ ಅವಾರ್ಡ್: ಪಂಜಾಬ್ ಕಿಂಗ್ಸ್: ₹10 ಲಕ್ಷ
ಪಿಚ್ ಅಂಡ್ ಗ್ರೌಂಡ್: ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್(ಕೆಕೆಆರ್ ಹೋಮ್ ಗ್ರೌಂಡ್): ₹50 ಲಕ್ಷ
ಪಿಚ್ ಅಂಡ್ ಗ್ರೌಂಡ್(4ಕ್ಕಿಂತ ಕಡಿಮೆ ಮ್ಯಾಚ್ ಆಯೋಜನೆ): ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್: ₹25 ಲಕ್ಷ


