* ಜಗತ್ತಿನ ಅತ್ಯಂತ ಹಿರಿಯ ಕ್ರಿಕೆಟಿಗ ಕೋವಿಡ್‌ಗೆ ಬಲಿ* 98 ವರ್ಷದ ಜಾನ್ ವ್ಯಾಟ್ಕಿನ್ಸ್ ಬಲಿಪಡೆದ ಕೊರೋನಾ ವೈರಸ್* 1949ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜಾನ್ ವ್ಯಾಟ್ಕಿನ್ಸ್
ಜೊಹಾನ್ಸ್‌ಬರ್ಗ್(ಸೆ.07): ಕೋವಿಡ್ ಸೋಂಕಿಗೆ ಒಳಗಾಗಿ 10 ದಿನಗಳ ಬಳಿಕ ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಜಾನ್ ವ್ಯಾಟ್ಕಿನ್ಸ್(98) ಡರ್ಬನ್‌ನಲ್ಲಿಂದು(ಸೆ.07) ಕೊನೆಯುಸಿರೆಳೆದಿದ್ದಾರೆ. ಜಗತ್ತಿನ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ಎನಿಸಿಕೊಂಡಿದ್ದ ಜಾನ್ ವ್ಯಾಟ್ಕಿನ್ಸ್ ಕೆಲ ದಿನಗಳಿಂದ ಆರೋಗ್ಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟ್ಸ್‌ಮನ್ ಹಾಗೂ ಮಧ್ಯಮ ವೇಗದ ಬೌಲರ್ ಆಗಿ ಪ್ರಖ್ಯಾತರಾಗಿದ್ದ ಜಾನ್ ವ್ಯಾಟ್ಕಿನ್ಸ್ ಎರಡನೇ ವಿಶ್ವಯುದ್ದ ಮುಗಿದ ಬಳಿಕ 1949ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಹರಿಣಗಳ ತಂಡದ ಪರ 15 ಟೆಸ್ಟ್ ಪಂದ್ಯಗಳನ್ನಾಡಿ 3 ಅರ್ಧಶತಕ ಸಹಿತ 612 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 29 ವಿಕೆಟ್ ಕಬಳಿಸಿದ್ದರು. ದಕ್ಷಿಣ ಆಫ್ರಿಕಾ 1957ರಲ್ಲಿ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ್ದರು.
ಜಾನ್ ವ್ಯಾಟ್ಕಿನ್ಸ್ ಕೇವಲ ಆಲ್ರೌಂಡರ್ ಆಗಿಯಷ್ಟೇ ಅಲ್ಲದೇ ಸ್ಲಿಪ್ ಫೀಲ್ಡರ್ ಆಗಿಯೂ ಹೆಚ್ಚು ಪ್ರಖ್ಯಾತರಾಗಿದ್ದರು. 1952-53ರಲ್ಲಿ ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಗಮನಾರ್ಹ ಪ್ರದರ್ಶನ ತೋರಿದ್ದರು. ಬ್ಯಾಟಿಂಗ್‌ನಲ್ಲಿ 408 ರನ್ ಹಾಗೂ ಬೌಲಿಂಗ್‌ನಲ್ಲಿ 16 ವಿಕೆಟ್ ಕಬಳಿಸುವ ಮೂಲಕ ಸರಣಿ 2-2 ಸಮಬಲ ಸಾಧಿಸುವಂತೆ ಮಾಡುವಲ್ಲಿ ಜಾನ್ ವ್ಯಾಟ್ಕಿನ್ಸ್ ಮಹತ್ವದ ಪಾತ್ರ ವಹಿಸಿದ್ದರು.
ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಅಯ್ಕೆ; ಪ್ರಕಟಣೆಯಷ್ಟೇ ಬಾಕಿ..!
ಜಾನ್ ವ್ಯಾಟ್ಕಿನ್ಸ್ ಒಟ್ಟು 60 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 2,158 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ ಒಟ್ಟು 96 ವಿಕೆಟ್ ಪಡೆದಿದ್ದರು. ಜಾನ್ ವ್ಯಾಟ್ಕಿನ್ಸ್ ನಿಧನಕ್ಕೆ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ.
