ಕರಾ​ಚಿ(ಮೇ.25): ಪಾಕಿ​ಸ್ತಾ​ನದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ತೌಫೀಕ್‌ ಉಮರ್‌ಗೆ ಕೊರೋನಾ ಸೋಂಕು ತಗು​ಲಿ​ರು​ವುದು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಅವರೇ ಸ್ಥಳೀಯ ಸುದ್ದಿ ವಾಹಿ​ನಿ​ಗೆ ಮಾಹಿತಿ ನೀಡಿ​ದ್ದಾರೆ. 

ಆದರೆ ಸೋಂಕಿನ ಪ್ರಮಾಣ ತೀವ್ರವಾಗಿಲ್ಲ. ಆದಷ್ಟುಬೇಗ ಗುಣ​ಮು​ಖ​ನಾ​ಗುವ ವಿಶ್ವಾಸವಿದೆ ಎಂದು ಉಮರ್‌ ತಿಳಿ​ಸಿ​ದ್ದಾರೆ. ಉಮರ್‌, ಕೊರೋನಾ ಸೋಂಕಿತ ಕ್ರಿಕೆ​ಟಿ​ಗರ ಪೈಕಿ ಉಮರ್‌ ನಾಲ್ಕ​ನೇ​ಯ​ವರು. ಈ ಮೊದಲು ಸ್ಕಾಟ್ಲೆಂಡ್‌ನ ಮಾಜಿದ್‌ ಹಕ್‌, ಪಾಕಿ​ಸ್ತಾ​ನದ ಝವರ್‌ ಸರ್ಫಾ​ರಾಜ್‌ ಹಾಗೂ ದ.ಆ​ಫ್ರಿ​ಕಾದ ಸೊಲೊ ಎನ್‌ಕ್ವೀನಿಗೆ ಸೋಂಕು ತಗು​ಲಿತ್ತು.

ನನ್ನ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಂಡು ಬಂದಿದ್ದರಿಂದ ಆರೊಗ್ಯ ತಪಾಸಣೆ ಮಾಡಿಸಿಕೊಂಡೆ, ನಿನ್ನೆ ರಾತ್ರಿ ನನಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ನಾನೀಗ ಮನೆಯಲ್ಲೇ ಪ್ರತ್ಯೇಕವಾಗಿ ಉಳಿದುಕೊಂಡಿದ್ದೇನೆ. ನೀವೆಲ್ಲರೂ ನಾನು ಆದಷ್ಟು ಬೇಗ ಗುಣಮುಖವಾಗಲೆಂದು ಪ್ರಾರ್ಥಿಸಿ ಎಂದು ಅಭಿಮಾನಿಗಳಿಗೆ ತೌಫೀಕ್‌ ಮನವಿ ಮಾಡಿಕೊಂಡಿದ್ದಾರೆ. 

ಅಭಿಮಾನಿಗಳಿಗಿಲ್ಲ ಪ್ರವೇಶ, ಸ್ಯಾನಿಟೈಸರ್ ಕಡ್ಡಾಯ; ಹೊಸ ರೂಪದಲ್ಲಿ ಟಿ10 ಲೀಗ್!

ತೌಫೀಕ್‌ ಪಾಕಿಸ್ತಾನ ಪರ 2001ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 13 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ತೌಫೀಕ್ 44 ಟೆಸ್ಟ್ ಹಾಗೂ 22 ಏಕದಿನ ಪಂದ್ಯಗಳನ್ನಾಡಿದ್ದು ಕ್ರಮವಾಗಿ 2963 ಹಾಗೂ 504 ರನ್ ಬಾರಿಸಿದ್ದಾರೆ. 

ಮೇ 24ರ ಅಂತ್ಯದ ವೇಳೆಗೆ ಜಗತ್ತಿನಾದ್ಯಂತ ಕೊರೋನಾ ಸೋಂಕಿಗೆ 53 ಲಕ್ಷಕ್ಕೂ ಅಧಿಕ ಮಂದಿ ತುತ್ತಾಗಿದ್ದಾರೆ. ಕ್ರೀಡಾ ಚಟುವಟಿಕೆಗಳು ಕೊರೋನಾದಿಂದಾಗಿ ಸಂಪೂರ್ಣ ಸ್ತಬ್ಧವಾಗಿವೆ. ಪಾಕಿಸ್ತಾನ ಸೂಪರ್ ಲೀಗ್ ಮಧ್ಯಕ್ಕೆ ಸ್ತಬ್ಧವಾಗಿದ್ದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಕೊರೋನಾ ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಮುಂಬರುವ ಟಿ20 ವಿಶ್ವಕಪ್ ನಡೆಯುವುದು ಅನುಮಾನ ಎನಿಸಿದೆ. 

"