ಟೀಂ ಇಂಡಿಯಾ ಮಾಜಿ ವೇಗಿ ಮುನಾಫ್ ಪಟೇಲ್ ತಮ್ಮ ತವರಿನಲ್ಲಿ ಕೊರೋನಾ ವಿರುದ್ದ ಸಮರ ಸಾರಿದ್ದಾರೆ. ಕೋವಿಡ್ ಆರೈಕೆ ಕೇಂದ್ರ ತೆರೆಯುವ ಮೂಲಕ ತಾಯ್ನಾಡಿನ ಋಣ ತೀರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಜು.30): ಜಾಗತಿಕ ಪಿಡುಗಾದ ಕೊರೋನಾ ಹೆಮ್ಮಾರಿಯ ವಿರುದ್ಧದ ಹೋರಾಟಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, 2011ರ ಏಕದಿನ ವಿಶ್ವಕಪ್ ಹೀರೋ ಮುನಾಫ್‌ ಪಟೇಲ್‌ ಕೈ ಜೋಡಿಸಿದ್ದಾರೆ. 

ಗುಜರಾತ್‌ನ ಭರೂಚ್‌ ಜಿಲ್ಲೆಯ ಇಕಾರ್‌ ಎಂಬ ತಮ್ಮ ಸ್ವಗ್ರಾಮದಲ್ಲಿ ಮುನಾಫ್‌ ಅವರು ಕೋವಿಡ್‌ ಕೇಂದ್ರ ಆರಂಭಿಸಿದ್ದಾರೆ. ಸ್ವಲ್ಪ ಪ್ರಮಾಣದಲ್ಲಿ ಕೊರೋನಾ ಸೋಂಕು ಇರುವವರು ಇಲ್ಲಿ ಕ್ವಾರಂಟೈನ್‌ ಆಗಬಹುದಾಗಿದೆ. ಈ ಕೋವಿಡ್‌ ಕೇಂದ್ರದಲ್ಲಿ ಕ್ವಾರಂಟೈನ್‌ಗೆ ಒಳಪಟ್ಟವರಿಗೆ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ಎಲ್ಲಾ ಉಚಿತವಾಗಿ ದೊರೆಯಲಿದೆ. 

View post on Instagram

ಸ್ಥಳೀಯ ಆರೋಗ್ಯ ಇಲಾಖೆಯೊಂದಿಗೆ ಮುನಾಫ್‌ ನಿರಂತರ ಸಂಪರ್ಕದಲ್ಲಿದ್ದು, ಕೋವಿಡ್‌ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮುನಾಫ್‌ ಅವರ ಕಾರ‍್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Scroll to load tweet…

ಮುನಾಫ್ ಅವರ ಈ ಜನಾನುರಾಗಿ ಕಾರ್ಯಕ್ಕೆ ಟೀಂ ಇಂಡಿಯಾ ಸಹಪಾಠಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಮಾಜಿ ವೇಗಿ ಕೆಲಸಕ್ಕೆ ಹ್ಯಾಟ್ಸ್‌ ಆಫ್ ಎಂದಿದ್ದು, ಇಂತಹ ಒಳ್ಳೆಯ ಕೆಲಸವನ್ನು ಮುಂದುವರೆಸಿ, ನಾವು ನಿಮ್ಮ ಜತೆ ಇದ್ದೇವೆ ಎಂದಿದ್ದಾರೆ. ಇನ್ನು ಪ್ರಗ್ಯಾನ್ ಓಜಾ ಹಾಗೂ ಯುವರಾಜ್ ಸಿಂಗ್ ಕೂಡಾ ಭರೋಚ್ ಎಕ್ಸ್‌ಪ್ರೆಸ್‌ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

2007ರ ಟಿ20 ವಿಶ್ವಕಪ್ ಹೀರೋ, ಇದೀಗ ರಿಯಲ್ ಲೈಫ್‌ನಲ್ಲೂ ಹೀರೋನೇ..!

ಕಳೆದ ಏಪ್ರಿಲ್‌ನಲ್ಲಿ ಭರೋಚ್ ಜಿಲ್ಲೆಯಲ್ಲಿ ನಾಲ್ವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಈ ವಿಚಾರ ಮುನಾಫ್ ಪಟೇಲ್ ಗಮನಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾದರು. ಸ್ಥಳೀಯ ಜಿಲ್ಲಾಡಳಿತ ಕೂಡಾ ಸ್ಟಾರ್ ಕ್ರಿಕೆಟಿಗನನ್ನು ಬಳಸಿಕೊಂಡು ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈಹಾಕಿತು. 

ಮುನಾಫ್ ಪಟೇಲ್ ಭಾರತ ಪರ 13 ಟೆಸ್ಟ್, 70 ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 35, 86 ಹಾಗೂ 4 ವಿಕೆಟ್ ಕಬಳಿಸಿದ್ದಾರೆ. ಇನ್ನು 2011ರ ಏಕದಿನ ವಿಶ್ವಕಪ್ ತಂಡದ ಸದಸ್ಯರಾಗಿದ್ದ ಮುನ್ನ ಬಾಂಗ್ಲಾದೇಶ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದರು. ಇನ್ನು ಪಾಕಿಸ್ತಾನ ವಿರುದ್ಧ ಮೊಹಾಲಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲೂ ಬರೋಚ್ ವೇಗಿ ಗಮನಾರ್ಹ ಪ್ರದರ್ಶನ ತೋರಿದ್ದರು.