ರೆಸ್ಟೋರೆಂಟ್ ಓಪನ್ ಮಾಡಿದ ಸುರೇಶ್ ರೈನಾ..! ಸಂತಸ ಹಂಚಿಕೊಂಡ ಮಾಜಿ ಕ್ರಿಕೆಟಿಗ
ಹೊಸ ಇನಿಂಗ್ಸ್ ಆರಂಭಿಸಿದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ
ಯೂರೋಪಿನ ಹೃದಯಭಾಗದಲ್ಲಿ 'ರೈನಾ ಇಂಡಿಯನ್ ರೆಸ್ಟೋರೆಂಟ್' ಓಪನ್
ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡ ರೈನಾ
ಆ್ಯಮ್ಸ್ಟರ್ಡ್ಯಾಮ್(ಜೂ.23): ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಆಟದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಇದೀಗ 'ಎರಡನೇ ಇನಿಂಗ್ಸ್' ಆರಂಭಿಸಿದ್ದಾರೆ. ಸುರೇಶ್ ರೈನಾ ಆಗಾಗ ಅಡುಗೆ ಮಾಡುವ ಪೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಇದೀಗ ರೈನಾ, ಭಾರತೀಯ ಶೈಲಿಯ ರೆಸ್ಟೋರೆಂಟ್‌ವೊಂದನ್ನು ನೆದರ್‌ಲೆಂಡ್ ರಾಜಧಾನಿ ಆ್ಯಮ್ಸ್ಟರ್ಡ್ಯಾಮ್‌ನಲ್ಲಿ ಆರಂಭಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಈ ಖುಷಿಯನ್ನು ಎಡಗೈ ಬ್ಯಾಟರ್ ಹಂಚಿಕೊಂಡಿದ್ದಾರೆ.
ಹೌದು. ನೆದರ್‌ಲೆಂಡ್‌ನ ಹೃದಯಭಾಗದಲ್ಲಿ 'ರೈನಾ ಇಂಡಿಯನ್ ರೆಸ್ಟೋರೆಂಟ್' ಎಂಬ ಹೆಸರಿನ ರೆಸ್ಟೋರೆಂಟ್‌ನ್ನು ಸುರೇಶ್ ರೈನಾ ಆರಂಭಿಸಿದ್ದಾರೆ. ಈ ಕುರಿತಂತೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ರೆಸ್ಟೋರೆಂಟ್‌ನಲ್ಲಿನಲ್ಲಿರುವ ಫೋಟೋ ಜತೆಗೆ, "ಆ್ಯಮ್ಸ್ಟರ್ಡ್ಯಾಮ್‌ನಲ್ಲಿ ರೈನಾ ಇಂಡಿಯನ್ ರೆಸ್ಟೋರೆಂಟ್ ಅನ್ನು ಪರಿಚಯಿಸಲು ನಾನು ಸಂಪೂರ್ಣವಾಗಿ ಭಾವಪರವಶನಾಗಿದ್ದೇನೆ, ಅಲ್ಲಿ ನನ್ನ ಆಹಾರ ಮತ್ತು ಅಡುಗೆಯ ಮೇಲಿನ ಉತ್ಸಾಹವನ್ನು ಕಾಣಬಹುದಾಗಿದೆ. ಹಲವು ವರ್ಷಗಳಿಂದ ನೀವು ನಾನು ಫುಡ್ ತಯಾರಿಸುವುದನ್ನು ನೋಡುತ್ತಲೇ ಬಂದಿದ್ದೀರ. ಇದೀಗ ನಾನು ಹೊಸ ಸಾಹಸವೊಂದನ್ನು ಕೈಗೊಂಡಿದ್ದೇನೆ. ಯೂರೋಪಿನ ಹೃದಯಭಾಗದಲ್ಲಿ ಭಾರತದ ಬೇರೆ ಬೇರೆ ಭಾಗದ ವಿವಿಧ ಪ್ಲೇವರ್‌ನ ಮೂಲ ರುಚಿ ಒಳಗೊಂಡಿರುವ ಆಹಾರವು ಸವಿಯಲು ಸಿಗಲಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಸುರೇಶ್ ರೈನಾ ಅವರ ಹೊಸ ಸಾಹಸಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡಾ ಶುಭ ಹಾರೈಸಿದ್ದಾರೆ. "ಅಭಿನಂದನೆಗಳು ಬ್ರದರ್, ನಾನೂ ಸದ್ಯದಲ್ಲಿಯೇ ಊಟ ಮಾಡಲು ಅಲ್ಲಿಗೆ ಭೇಟಿ ಕೊಡುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ವಿದೇಶದಲ್ಲಿ ರೆಸ್ಟೋರೆಂಟ್ ಆರಂಭಿಸಿದ ಸೆಲಿಬ್ರಿಟಿಗಳ ಪೈಕಿ ಸುರೇಶ್ ರೈನಾ ಮೊದಲಿಗರೇನೂ ಅಲ್ಲ. ಈಗಾಗಲೇ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ನ್ಯೂಯಾರ್ಕ್‌ನಲ್ಲಿ ಹಾಗೂ ಆಶಾ ಭೋಸ್ಲೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತೀಯ ಶೈಲಿಯ ರೆಸ್ಟೋರೆಂಟ್ ಆರಂಭಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಒಡೆತನದಲ್ಲಿ ಹಲವು ರೆಸ್ಟೋರೆಂಟ್ ಸಮೂಹಗಳು ಭಾರತದಲ್ಲಿ ಇವೆ.
ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ, ಭಾರತ ಕ್ರಿಕೆಟ್ ತಂಡ ಯಶಸ್ವಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಸುರೇಶ್ ರೈನಾ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಸ್ಥಿರ ಪ್ರದರ್ಶನ ತೋರುವ ಮೂಲಕ ಮಿಸ್ಟರ್ ಐಪಿಎಲ್ ಎನ್ನುವ ಖ್ಯಾತಿಗೆ ಭಾಜನರಾಗಿದ್ದರು. ಇನ್ನು ಸುರೇಶ್ ರೈನಾ 2020ರ ಆಗಸ್ಟ್ 15ರಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕೆಲವೇ ಗಂಟೆಗಳಲ್ಲಿ ರೈನಾ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ ಐಪಿಎಲ್ ಟೂರ್ನಿಯ ವೇಳೆ ವೀಕ್ಷಕ ವಿವರಣೆಗಾರಿಕೆ ಮೂಲಕ ರೈನಾ ತಮ್ಮ ಅಭಿಮಾನಿಗಳ ಜತೆ ಸಂಪರ್ಕ ಹೊಂದಿದ್ದಾರೆ.