ನವದೆಹಲಿ(ಮಾ.13): ಭಾರತದ ದಿಗ್ಗಜ ಸ್ಪಿನ್ನರ್‌ ಬಿಷನ್‌ ಸಿಂಗ್‌ ಬೇಡಿ 24 ದಿನಗಳ ಕಾಲ ಆಸ್ಪತ್ರೆ ವಾಸ ಮುಗಿಸಿ ಮನೆಗೆ ವಾಪಸಾಗಿದ್ದಾರೆ. ಹೃದಯಾಘಾತಕ್ಕೊಳಗಾಗಿದ್ದ ಬೇಡಿ, ಫೆಬ್ರವರಿ 18ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 

ಜೊತೆಗೆ ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಮತ್ತೊಂದು ಶಸ್ತ್ರಚಿಕಿತ್ಸೆ ಸಹ ಮಾಡಿಸಿಕೊಂಡಿದ್ದರು. ಇದೀಗ ಅವರ ಆರೋಗ್ಯ ಸುಧಾರಿಸಿದ್ದು, ವೈದ್ಯರು ಮತ್ತಷ್ಟು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 74 ವರ್ಷದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬೇಡಿ, ರಾಷ್ಟ್ರ ರಾಜಧಾನಿ ಸರ್‌. ಗಂಗಾರಾಮ್‌ ಆಸ್ಪತ್ರೆಯಲ್ಲಿ ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದರು. ಬೇಡಿ ಸ್ನೇಹಿತರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಡೆಲ್ಲಿ ಮಾಜಿ ನಾಯಕ ಇದೀಗ ಸಂಪೂರ್ಣ ಫಿಟ್‌ ಆಗಿದ್ದು, ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕೋಟ್ಲಾದಲ್ಲಿ ಜೇಟ್ಲಿ ಪ್ರತಿಮೆ; DDCA ವಿರುದ್ಧ ಕಿಡಿಕಾರಿದ ಬಿಷನ್ ಸಿಂಗ್ ಬೇಡಿ
 
1967ರಿಂದ 1979ರ ಅವಧಿಯಲ್ಲಿ ಭಾರತದ ಪ್ರಮುಖ ಎಡಗೈ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದ ಬೇಡಿ 67 ಟೆಸ್ಟ್ ಹಾಗೂ 10 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿ ಕ್ರಮವಾಗಿ 266 ಹಾಗೂ 7 ವಿಕೆಟ್‌ ಕಬಳಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಅರುಣ್‌ ಜೇಟ್ಲಿ ಪ್ರತಿಮೆ ಪ್ರತಿಷ್ಟಾಪನೆ ಮಾಡುವ ಡಿಡಿಸಿಎ ನಿರ್ಧಾರವನ್ನು ಕಟುವಾಗಿ ಖಂಡಿಸುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು.