ಏಷ್ಯಾಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟಬರೋಬ್ಬರಿ 14 ಸ್ಥಾನ ಜಿಗಿತ ಕಂಡ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಆಲ್ರೌಂಡರ್ ವಿಭಾಗದಲ್ಲಿ ಟಾಪ್ 5 ಪಟ್ಟಿಯೊಳಗೆ ಹಸರಂಗ ಎಂಟ್ರಿ
ದುಬೈ(ಸೆ.14): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಏಷ್ಯಾಕಪ್ ಟೂರ್ನಿಯ ಮೂಲಕ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಒಟ್ಟು 5 ಇನಿಂಗ್ಸ್‌ಗಳನ್ನಾಡಿದ ವಿರಾಟ್ ಕೊಹ್ಲಿ ಎರಡು ಅರ್ಧಶತಕ ಹಾಗೂ ಒಂದು ಅಜೇಯ ಶತಕದ ನೆರವಿನಿಂದ ಒಟ್ಟಾರೆ 276 ರನ್ ಬಾರಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಇದೀಗ ಐಸಿಸಿ ನೂತನ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, 14 ಸ್ಥಾನಗಳನ್ನು ಜಿಗಿದು ವಿರಾಟ್ ಕೊಹ್ಲಿ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ, ಏಷ್ಯಾಕಪ್ ಟೂರ್ನಿಗೂ ಮುನ್ನ 29ನೇ ರ‍್ಯಾಂಕಿಂಗ್‌ಗೆ ಜಾರಿದ್ದರು. ಆದರೆ 33 ವರ್ಷದ ವಿರಾಟ್ ಕೊಹ್ಲಿ, ಏಷ್ಯಾಕಪ್ ಟೂರ್ನಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ, ಪಾಕಿಸ್ತಾನದ ಮೊಹಮ್ಮದ್ ರಿಜ್ಚಾನ್ ಬಳಿಕ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದರು.
ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಮೊದಲಿಗೆ ಹಾಂಕಾಂಗ್ ಎದುರು ಅರ್ಧಶತಕ ಬಾರಿಸಿದ್ದರು. ಇದಾದ ಬಳಿಕ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ಆಕರ್ಷಕ ಅರ್ಧಶತಕ ಸಿಡಿಸಿದ್ದರು. ಇನ್ನು ಆಫ್ಘಾನಿಸ್ತಾನ ಎದುರು ಅಜೇಯ 122 ರನ್ ಬಾರಿಸುವ ಮೂಲಕ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಬಾರಿಸುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದರು.
ಐಸಿಸಿ ಟಿ20 ರ‍್ಯಾಂಕಿಂಗ್‌ನ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರ ಆರು ಬ್ಯಾಟರ್‌ಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 810 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಏಯ್ಡನ್ ಮಾರ್ಕ್‌ರಮ್, ಬಾಬರ್ ಅಜಂ, ಸೂರ್ಯಕುಮಾರ್ ಯಾದವ್, ಡೇವಿಡ್ ಮಲಾನ್, ಆರೋನ್ ಫಿಂಚ್ ಟಾಪ್ 6 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಡೆವೊನ್ ಕಾನ್‌ವೇ ಒಂದು ಸ್ಥಾನ ಮೇಲೇರಿ 7ನೇ ಸ್ಥಾನ ಪಡೆದರೆ, ಲಂಕಾದ ಪತುಮ್ ನಿಸ್ಸಾಂಕ 8ನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನು ಯುಎಇ ತಂಡದ ಮೊಹಮದ್ ವಾಸೀಂ ಹಾಗೂ ದಕ್ಷಿಣ ಆಫ್ರಿಕಾದ ರೀಜಾ ಹೆಂಡ್ರಿಕ್ಸ್ ಕ್ರಮವಾಗಿ 9 ಹಾಗೂ 10ನೇ ಸ್ಥಾನ ಪಡೆದಿದ್ದಾರೆ.
ಟೀಂ ಇಂಡಿಯಾ ಎದುರಿನ ಸರಣಿಗೂ ಮುನ್ನ ಆಸ್ಟ್ರೇಲಿಯಾಗೆ ಬಿಗ್ ಶಾಕ್; ಮೂವರು ಸ್ಟಾರ್ ಆಟಗಾರರು ಭಾರತ ಪ್ರವಾಸದಿಂದ ಔಟ್..!
ಇನ್ನು ಟಿ20 ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಕೂಡಾ ಮೊದಲ 5 ಸ್ಥಾನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಜೋಶ್ ಹೇಜಲ್‌ವುಡ್, ತಬ್ರೀಜ್ ಶಮ್ಸಿ, ಆದಿಲ್ ರಶೀದ್, ಆಡಂ ಜಂಪಾ ಹಾಗೂ ರಶೀದ್ ಖಾನ್ ಕ್ರಮವಾಗಿ ಮೊದಲ 5 ಸ್ಥಾನ ಪಡೆದಿದ್ದಾರೆ. ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ವನಿಂದು ಹಸರಂಗ ಒಂದು ಸ್ಥಾನ ಮೇಲೇರಿ 6ನೇ ಸ್ಥಾನಪಡೆದರೆ, ಭುವನೇಶ್ವರ್ ಕುಮಾರ್. ಮಹೀಶ್ ತೀಕ್ಷಣ, ಮುಜೀಬ್ ಉರ್ ರೆಹಮಾನ್ ಹಾಗೂ ಅಕೆಲ್ ಹೊಸೈನ್ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ
ಆಲ್ರೌಂಡರ್ ವಿಭಾಗದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶಕೀಬ್ ಅಲ್ ಹಸನ್ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಮೊಹಮ್ಮದ್ ನಬಿ, ಮೋಯಿನ್ ಅಲಿ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಇನ್ನು ಲಂಕಾ ಸ್ಟಾರ್ ಆಲ್ರೌಂಡರ್ ವನಿಂದು ಹಸರಂಗ 4 ಸ್ಥಾನ ಜಿಗಿತ ಕಂಡು 4ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ 5ನೇ ಸ್ಥಾನಕ್ಕೆ ಕುಸಿದರೆ, ಹಾರ್ದಿಕ್ ಪಾಂಡ್ಯ 7ನೇ ಸ್ಥಾನಕ್ಕೆ ಕುಸಿದಿದ್ದಾರೆ.
