ಸಿಡ್ನಿ(ಜ.27): ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಸಾರ್ವಕಾಲಿಕ ಶ್ರೇಷ್ಠ ಕ್ಷೇತ್ರರಕ್ಷಕರನ್ನು ಆಯ್ಕೆ ಮಾಡಿದ್ದು, ಅಭಿಮಾನಿಗಳನ್ನು ಅಚ್ಚರಿಗೊಳಗಾಗುವಂತೆ ಮಾಡಿದ್ದಾರೆ.

ಆಸ್ಟ್ರೇಲಿಯಾ ಪರ 168 ಟೆಸ್ಟ್ ಪಂದ್ಯಗಳನ್ನಾಡಿರುವ ಪಾಂಟಿಂಗ್ ಅವರಿಗೆ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬ ನಿಮ್ಮ ಪ್ರಕಾರ ಸಾರ್ವಕಾಲಿಕ ಮೂವರು ಫೀಲ್ಡರ್‌ಗಳು ಯಾರು ಎಂದು ಕೇಳಿದ್ದಾರೆ.  ಇದಕ್ಕೆ ಪಂಟರ್, ಸಹ ಆಟಗಾರನಾಗಿದ್ದ ಆಂಡ್ರ್ಯೂ ಸೈಮಂಡ್ಸ್, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್ ಹಾಗೂ ಜಾಂಟಿ ರೋಡ್ಸ್ ಎಂದು ಉತ್ತರಿಸಿದ್ದಾರೆ.

ಆಧುನಿಕ ಕ್ರಿಕೆಟ್‌ನಲ್ಲಿ ಬಹುತೇಕ ಎಲ್ಲರೂ ಜಾಂಟಿ ರೋಡ್ಸ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎನ್ನುವ ಮಾತನ್ನು ಒಪ್ಪುತ್ತಾರೆ. ಜಾಂಟಿ ರೋಡ್ಸ್ ಫೀಲ್ಡಿಂಗ್ ಮಾಡುವ ವೇಳೆ ಪಾದರಸದಂತಿರುತ್ತಿದ್ದರು. ಅದರಲ್ಲೂ 1992ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಇಂಜಮಾಮ್ ಉಲ್-ಹಕ್ ಅವರನ್ನು ಜಾಂಟಿ ರೋಡ್ಸ್‌ ರನೌಟ್ ಮಾಡಿದ ಕ್ಷಣ ಕ್ರಿಕೆಟ್ ಅಭಿಮಾನಿಗಳ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ಉಳಿದಿದೆ. ಎಬಿ ಡಿವಿಲಿಯರ್ಸ್ ಸಹ ಅದ್ಭುತ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದರು.

ಆದರೆ ಸೈಮಂಡ್ಸ್ ಅವರನ್ನು ಟಾಪ್ 3 ಪಟ್ಟಿಯಲ್ಲಿ ಸ್ಥಾನ ನೀಡಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಸೈಮಂಡ್ಸ್‌ಗಿಂತ ಮೊಹಮ್ಮದ್ ಕೈಫ್, ರವೀಂದ್ರ ಜಡೇಜಾ ಅವರಿಗೆ ಸ್ಥಾನ ನೀಡಬಹುದಿತ್ತು ಎಂದಿದ್ದಾರೆ.