ಗಯಾನ(ಫೆ.27): ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ವಿಂಡೀಸ್‌ ಕ್ರಿಕೆಟ್‌ ಮಂಡಳಿ ಮುಂಬರುವ ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯಲಿರು ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟಿಸಲಾಗಿದೆ. 3 ಪಂದ್ಯಗಳ ಟಿ20 ಸರಣಿಗೆ 14 ಆಟಗಾರರನ್ನೊಳಗೊಂಡ ವಿಂಡೀಸ್‌ ತಂಡವನ್ನು ಪ್ರಕಟಿಸಿದ್ದು, 41 ವರ್ಷದ ಕ್ರಿಸ್‌ ಗೇಲ್‌ ಹಾಗೂ ಅನುಭವಿ ವೇಗಿ ಫಿಡೆಲ್‌ ಎಡ್ವರ್ಡ್ಸ್ ತಂಡ ಕೂಡಿಕೊಂಡಿದ್ದಾರೆ. 

2019ರ ಮಾರ್ಚ್‌ನಲ್ಲಿ ಇಂಗ್ಲೆಂಡ್‌ ವಿರುದ್ದ ಕಡೆಯ ಬಾರಿಗೆ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದ ಗೇಲ್‌, ಬರೋಬ್ಬರಿ ಎರಡು ವರ್ಷಗಳ ಬಳಿಕ ಮತ್ತೆ ಕೆರಿಬಿಯನ್ ಪಡೆ ಕೂಡಿಕೊಂಡಿದ್ದಾರೆ. ಇದುವರೆಗೂ ವಿಂಡೀಸ್‌ ಪರ 58 ಟಿ20 ಪಂದ್ಯಗಳನ್ನಾಡಿರುವ ಗೇಲ್‌ 1627 ರನ್‌ ಚಚ್ಚಿದ್ದಾರೆ. 

ಕರ್ನಾಟಕದ ಐಪಿಎಲ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌..?

ಇನ್ನು ವಿಂಡೀಸ್‌ ಮಾರಕ ವೇಗಿ ಫಿಡೆಲ್‌ ಎಡ್ವರ್ಡ್ಸ್ 2012ರಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದರು. ಇತ್ತೀಚಿನ ದಿನಗಳಲ್ಲಿ ಎಡ್ವರ್ಡ್‌ ಮಿಂಚಿನ ದಾಳಿ ಸಂಘಟಿಸುತ್ತಿರುವುದರಿಂದ ಮಾರ್ಚ್‌3, 5 ಹಾಗೂ 7ರಂದು ನಡೆಯಲಿರುವ ಟಿ20 ಸರಣಿಗೆ ವಿಂಡೀಸ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಇದೇ ವೇಳೆ ಸರ್‌ ವಿವಿನ್‌ ರಿಚರ್ಡ್‌ ಸ್ಟೇಡಿಯಂನಲ್ಲಿ ಮಾರ್ಚ್ 10, 12 ಹಾಗೂ 14ರಂದು ನಡೆಯಲಿರುವ ಏಕದಿನ ಸರಣಿಗೂ ವಿಂಡೀಸ್‌ ಮಂಡಳಿ ತನ್ನ ಆಟಗಾರರನ್ನು ಪ್ರಕಟಿಸಿದೆ.

ಟಿ20 ತಂಡ: ಕೀರನ್ ಪೊಲ್ಲಾರ್ಡ್(ನಾಯಕ), ನಿಕೋಲಸ್ ಪೂರನ್‌, ಫ್ಯಾಬಿಯನ್ ಅಲನ್, ಡ್ವೇನ್‌ ಬ್ರಾವೋ, ಫಿಡೆಲ್‌ ಎಡ್ವರ್ಡ್, ಆಂಡ್ರೆ ಫ್ಲೆಚರ್‌, ಕ್ರಿಸ್ ಗೇಲ್‌, ಜೇಸನ್ ಹೋಲ್ಡರ್, ಏಕೇಲ್‌ ಹುಸೈನ್‌, ಎವಿನ್ ಲೆವಿಸ್‌, ಒಬೆಡ್‌ ಮೆಕೈ, ರೋಮನ್‌ ಪೋವೆಲ್‌, ಲೆಂಡ್ಲ್ ಸಿಮೊನ್ಸ್‌, ಕೆವಿನ್ ಸಿಂಕ್ಲೇರ್‌

ಏಕದಿನ ತಂಡ: ಕೀರನ್‌ ಪೊಲ್ಲಾರ್ಡ್(ನಾಯಕ), ಶಾಯ್ ಹೋಮ್‌, ಫ್ಯಾಬಿಯನ್ ಅಲನ್‌, ಡೇರನ್ ಬ್ರಾವೋ, ಜೇಸನ್ ಹೋಲ್ಡರ್, ಏಕೇಲ್ ಹುಸೈನ್‌, ಅಲ್ಜೆರಿ ಜೋಸೆಫ್‌, ಎವಿನ್ ಲೆವಿಸ್, ಕೈಲ್‌ ಮೇರಿಸ್‌, ಜೇಸನ್‌ ಮೊಹಮದ್, ನಿಕೋಲಸ್‌ ಪೂರನ್‌, ರೊಮ್ಯಾರಿಯೋ ಶೆಫರ್ಡ್, ಕೆವಿನ್‌ ಸಿಂಕ್ಲೇರ್.