ಜೋಹಾನ್ಸ್‌ಬರ್ಗ್‌(ಫೆ.18): ದಕ್ಷಿಣ ಆಫ್ರಿಕಾದ ಟೆಸ್ಟ್‌ ಮತ್ತು ಟಿ20 ಕ್ರಿಕೆಟ್‌ ತಂಡದ ನಾಯಕ ಫಾಫ್‌ ಡು ಪ್ಲೆಸಿಸ್ ಹಠಾತ್ತಾಗಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಮುಂದಿನ ಪೀಳಿಗೆಗೆ ಅವಕಾಶ ಕಲ್ಪಿಸಿಕೊಡಬೇಕೆನ್ನುವ ಕಾರಣಕ್ಕಾಗಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಡು ಪ್ಲೆಸಿಸ್ ಹೇಳಿಕೊಂಡಿದ್ದಾರೆ. 2013ರಲ್ಲಿ ಟಿ20 ತಂಡದ ನಾಯಕರಾಗಿ ನೇಮಕಗೊಂಡಿದ್ದ ಡು ಪ್ಲೆಸಿಸ್, 4 ವರ್ಷಗಳ ಬಳಿಕ ಎಬಿ ಡಿ ವಿಲಿಯರ್ಸ್ ಕ್ಯಾಪ್ಟನ್ಸಿಗೆ ನಿವೃತ್ತಿ ಘೋಷಿಸಿದಾಗ ಏಕದಿನ ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದರು. 

ಎಬಿ ಡಿವಿಲಿಯರ್ಸ್‌ಗೆ ಮಿ.360 ಎಂದು ಕರೆಯೋದೇಕೆ..?

ಆಸ್ಪ್ರೇಲಿಯಾ ವಿರುದ್ಧ ತವರಿನಲ್ಲಿ ಹಾಗೂ ತವರಿನಾಚೆ ಟೆಸ್ಟ್‌ ಹಾಗೂ ಏಕದಿನ ಸರಣಿಗಳನ್ನು ಗೆದ್ದ ದಕ್ಷಿಣ ಆಫ್ರಿಕಾದ ಏಕೈಕ ನಾಯಕ ಎನ್ನುವ ದಾಖಲೆಯನ್ನು ಡು ಪ್ಲೆಸಿಸ್ ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ನಾಯಕರಾಗಿ ಮುನ್ನಡೆಸಿದ ಮೊದಲ 20 ಪಂದ್ಯಗಳ ಪೈಕಿ ಹರಿಣಗಳ ಪಡೆ 17ರಲ್ಲಿ ಜಯ ಸಾಧಿಸಿತ್ತು. 

ಎಬಿಡಿ ಕಮ್‌ಬ್ಯಾಕ್ ವಿಚಾರ: ಕುತೂಹಲ ಹುಟ್ಟಿಸಿದ ನಾಯಕನ ಮಾತು..!

ಇದಷ್ಟೇ ಅಲ್ಲದೇ ನಾಯಕನಾಗಿ ಟೆಸ್ಟ್, ಏಕದಿನ ಹಾಗೂ ಟಿ20 ಹೀಗೆ ಮೂರು ಮಾದರಿಯಲ್ಲೂ ಶತಕ ಸಿಡಿಸಿದ ವಿಶ್ವದ ಎರಡನೇ ಹಾಗೂ ದಕ್ಷಿಣ ಆಫ್ರಿಕಾದ ಮೊದಲ ನಾಯಕ ಎನ್ನುವ ಗೌರವಕ್ಕೂ ಡು ಪ್ಲೆಸಿಸ್ ಭಾಜನರಾಗಿದ್ದಾರೆ. ಫಾಫ್ ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾ ಪರ 36 ಟೆಸ್ಟ್, 39 ಏಕದಿನ ಹಾಗೂ 40 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಕ್ರಮವಾಗಿ 18, 28 ಹಾಗೂ 25 ಪಂದ್ಯಗಳಲ್ಲಿ ತಂಡವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದ್ದಾರೆ.