ಇಂಗ್ಲೆಂಡ್-ವಿಂಡೀಸ್ ಮೊದಲ ಟೆಸ್ಟ್‌ಗೆ ಮಳೆ ಕಾಟ!
ಬರೋಬ್ಬರಿ 117 ದಿನಗಳ ಬಳಿಕ ಆರಂಭವಾದ ಟೆಸ್ಟ್‌ಗೆ ಮೊದಲ ದಿನವೇ ಮಳೆ ಅಡ್ಡಿಪಡಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್ ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 35 ರನ್ ಬಾರಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸೌಥಾಂಪ್ಟನ್(ಜು.09): ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವ ಮೊದಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭಗೊಂಡಿದ್ದು, ಬುಧವಾರ ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ಮೊದಲ ಟೆಸ್ಟ್‌ನಲ್ಲಿ ಕಣಕ್ಕಿಳಿದವು. 117 ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್ ಪುನಾರಂಭಗೊಂಡಿತು.
ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣಕ್ಕೆ ಪ್ರೇಕ್ಷಕರ ಪ್ರವೇಶ ನಿರ್ಬಂಧದೊಂದಿಗೆ ನಡೆದ ಈ ಬಹು ನಿರೀಕ್ಷಿತ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಮೊದಲ ಅವಧಿ ಮಳೆಗೆ ಬಲಿಯಾಯಿತು. ಭೋಜನ ವಿರಾಮದ ಬಳಿಕ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಖಾತೆ ತೆರೆಯುವ ಮೊದಲೇ ಡಾಮ್ ಸಿಬ್ಲೆ (0) ವಿಕೆಟ್ ಕಳೆದುಕೊಂಡಿತು.
ಚಹಾ ವಿರಾಮದ ವೇಳೆಗೆ ಇಂಗ್ಲೆಂಡ್ 1 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತು. ಮಳೆಯಿಂದಾಗಿ ಮೊದಲ ದಿನದ ಆಟವನ್ನು 58 ಓವರ್‌ಗಳಿಗೆ ಇಳಿಸಲಾಗಿತ್ತು. ಇದಾದ ಬಳಿಕವೂ ಮಳೆ ಸುರಿದಿದ್ದರಿಂದ ಮೊದಲ ದಿನದಾಟವನ್ನು ಮುಗಿಸಲಾಯಿತು. ಶೆನಾನ್ ಗೇಬ್ರಿಯಲ್ ತಾವೆಸದ ಮೊದಲ ಓವರ್‌ನಲ್ಲೇ ವಿಂಡೀಸ್‌ಗೆ ಮೊದಲ ಯಶಸ್ಸನ್ನು ತಂದಿಕ್ಕಿದರು. ಇದೀಗ ರೋರಿ ಬರ್ನ್ಸ್(20) ಹಾಗೂ ಜೋ ಡೆನ್ಲಿ(14) ಎರಡನೇ ದಿನದಾಟಕ್ಕೆ ಕ್ರೀಸ್
ಕಾಯ್ದುಕೊಂಡಿದ್ದಾರೆ.
ಹೊಸ ರೂಲ್ಸ್‌ನೊಂದಿಗೆ ಇಂದಿನಿಂದ ಟೆಸ್ಟ್ ಕ್ರಿಕೆಟ್ ಆರಂಭ!
ಕ್ರೀಡಾಂಗಣಕ್ಕೆ ಸೀಮಿತ ಮಂದಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಪಂದ್ಯವನ್ನು ವರದಿ ಮಾಡಲು ಬಂದಿದ್ದ ಪತ್ರಕರ್ತರು, ಪ್ರೆಸ್ ಬಾಕ್ಸ್‌ನಲ್ಲಿ ಅಂತರ ಕಾಯ್ದುಕೊಂಡು ಕುಳಿತಿದ್ದರು.
ಸ್ಕೋರ್: ಇಂಗ್ಲೆಂಡ್ (ಮೊದಲ ದಿನದ ಚಹಾ ವಿರಾಮಕ್ಕೆ) 35/1