ಅಹಮದಾಬಾದ್(ಮಾ.10)‌: ಭಾರತ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದ ವೇಳೆ ಆರೋಗ್ಯ ಸಮಸ್ಯೆ ತಂಡದ ಆಟಗಾರರನ್ನು ಸಾಕಷ್ಟುಕಾಡಿತು. ಹೊಟ್ಟೆನೋವಿನಿಂದ ತೀವ್ರವಾಗಿ ಬಳಲಿದೆವು. ಏಕಾಏಕಿ ತೂಕ ಇಳಿಕೆ ಸಮಸ್ಯೆಗೆ ಒಳಗಾದೆವು ಎಂದು ಹೇಳುವ ಮೂಲಕ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌, ಭಾರತ ವಿರುದ್ಧದ ಅಂತಿಮ ಟೆಸ್ಟ್‌ ಸೋಲಿಗೆ ಅನಾರೋಗ್ಯವೇ ಕಾರಣ ಎಂದು ಸಮಜಾಯಿಷಿ ನೀಡಿದ್ದಾರೆ.

ಭಾರತ ವಿರುದ್ಧ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಇನ್ನಿಂಗ್ಸ್‌ ಹಾಗೂ 25 ರನ್‌ಗಳ ಅಂತರದಿಂದ ಸೋಲುಂಡಿತ್ತು. ಇದರೊಂದಿಗೆ ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ 1-3 ಅಂತರದಿಂದ ಸೋಲುಂಡಿತ್ತು.

ಟೀಂ ಇಂಡಿಯಾ ದಿಗ್ವಿಜಯ; ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಿದ ಭಾರತ

ಡೈಲಿ ಮಿರರ್‌ ಪತ್ರಿಕೆಗೆ ಹೇಳಿಕೆ ನೀಡಿರುವ ಸ್ಟೋಕ್ಸ್‌, ‘ತಂಡದ ಆಟಗಾರರು ಇಲ್ಲಿನ 41 ಡಿಗ್ರಿ ಉಷ್ಣಾಂಶದ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ತಾಪಮಾನ ನಮ್ಮ ಮೇಲೆ ಸಾಕಷ್ಟುಪರಿಣಾಮ ಬೀರಿತು. ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಯಿತು. ನಾನು ಒಂದೇ ವಾರದಲ್ಲಿ 5 ಕೆ.ಜಿ. ತೂಕ ಕಳೆದುಕೊಂಡರೆ, ಡೊಮ್‌ನಿಕ್‌ ಸಿಬ್ಲಿ 4 ಹಾಗೂ ಜಿಮ್ಮಿ ಆ್ಯಂಡರ್‌ಸನ್‌ 3 ಕೆ.ಜಿ. ತೂಕ ಕಳೆದುಕೊಂಡರು. ಜಾಕ್‌ ಲೀಚ್‌ ಮೈದಾನಕ್ಕಿಂತ ಶೌಚಾಲಯದಲ್ಲೇ ಹೆಚ್ಚಿನ ಸಮಯ ಕಳೆದ. ಆದಾಗ್ಯೂ ಇಂಗ್ಲೆಂಡ್‌ ಗೆಲುವಿಗೆ ನಾವು ಸಾಕಷ್ಟು ಶ್ರಮ ವಹಿಸಿದೆವು’ ಎಂದು ಹೇಳಿದ್ದಾರೆ.