Asianet Suvarna News Asianet Suvarna News

T20 World Cup: 2022ರ ಟಿ20 ವಿಶ್ವಕಪ್ ಆಡುತ್ತೇನೆಂದ ಇಯಾನ್ ಮಾರ್ಗನ್‌..!

* ಐಸಿಸಿ ಟಿ20 ವಿಶ್ವಕಪ್‌ನ ಸೆಮೀಸ್‌ನಲ್ಲಿ ಸೋಲುಂಡ ಇಂಗ್ಲೆಂಡ್

* ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ಗೆ ಶರಣಾದ ಇಂಗ್ಲೆಂಡ್ ತಂಡ

* ನಾಯಕನಾಗಿ ಮುಂದುವರೆಯುವ ವಿಶ್ವಾಸ ವ್ಯಕ್ತಪಡಿಸಿದ ಇಯಾನ್ ಮಾರ್ಗನ್

England Cricket Captain Eoin Morgan desire to play ICC T20 World Cup 2022 kvn
Author
Bengaluru, First Published Nov 11, 2021, 5:43 PM IST

ದುಬೈ(ನ.11): ಇಂಗ್ಲೆಂಡ್‌ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ನಾಯಕ ಇಯಾನ್ ಮಾರ್ಗನ್‌ (Eoin Morgan), ಮುಂಬರುವ 2022ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ (England Cricket Team) ಅತಿಹೆಚ್ಚು ಗೆಲುವುಗಳನ್ನು ತಂದುಕೊಟ್ಟ ನಾಯಕ ಎನ್ನುವ ಕೀರ್ತಿಗೆ ಪಾತ್ರವಾಗಿರುವ ಇಯಾನ್ ಮಾರ್ಗನ್‌, ಈ ಬಾರಿ ತಂಡವನ್ನು ಫೈನಲ್‌ಗೇರಿಸಲು ವಿಫಲವಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni), ಅಸ್ಗರ್ ಆಫ್ಘಾನ್‌ ಅವರನ್ನು ಹಿಂದಿಕ್ಕಿ 43 ಬಾರಿ ತಂಡವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದ ನಾಯಕ ಎನ್ನುವ ದಾಖಲೆಯನ್ನು ಇಯಾನ್ ಮಾರ್ಗನ್ ಬರೆದಿದ್ದಾರೆ. ಆದರೆ ಸೆಮಿಫೈನಲ್‌ನಲ್ಲಿ ಮಾರ್ಗನ್ ಪಡೆ ಕಿವೀಸ್‌ಗೆ ಶರಣಾಗುವ ಮೂಲಕ ತನ್ನ ಅಭಿಯಾನ ಮುಗಿಸಿದೆ.

T20 World Cup: Eng vs NZ ಇಂಗ್ಲೆಂಡ್ ಎದುರು ಗೆದ್ದರೂ ನೀಶಮ್ ಏಕೆ ಸಂಭ್ರಮಿಸಲಿಲ್ಲ..?

ಇಯಾನ್‌ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡವು 2016ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿತ್ತು. ಕೋಲ್ಕತದ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (West Indies Cricket) ಎದುರು ಆಘಾತಕಾರಿ ಸೋಲು ಕಂಡಿತ್ತು. ಈ ಬಾರಿ ಕೂಡಾ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದ್ದ ಇಂಗ್ಲೆಂಡ್, ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 5 ವಿಕೆಟ್‌ಗಳ ಅಂತರದ ಸೋಲು ಕಂಡಿತು.

2022ರಲ್ಲಿ ತಂಡವನ್ನು ಮುನ್ನಡೆಸುವ ವಿಶ್ವಾಸದಲ್ಲಿದ್ದಾರೆ ಮಾರ್ಗನ್‌:

2019ರ ಏಕದಿನ ವಿಶ್ವಕಪ್ ಫೈನಲ್‌ ಸೋಲಿಗೆ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ನ್ಯೂಜಿಲೆಂಡ್‌ ಸೇಡು ತೀರಿಸಿಕೊಂಡಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ತಂಡವು, ಮೋಯಿನ್ ಅಲಿ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 167 ರನ್‌ ಕಲೆಹಾಕಿತ್ತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಆರಂಭದಲ್ಲೇ ಮಾರ್ಟಿನ್ ಗಪ್ಟಿಲ್ ಹಾಗೂ ಕೇನ್ ವಿಲಿಯಮ್ಸನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಡೆವೊನ್ ಕಾನ್‌ವೇ, ಜೇಮ್ಸ್‌ ನೀಶಮ್ ಹಾಗೂ ಡೇರಲ್ ಮಿಚೆಲ್ ಬಾರಿಸಿದ ಅಜೇಯ 72 ರನ್‌ಗಳ ನೆರವಿನಿಂದ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಕಿವೀಸ್ ತಂಡವು ಗೆಲುವಿನ ನಗೆ ಬೀರಿತು. 

T20 World Cup: Eng vs NZ ನಗು ನಗುತ್ತಲೇ ಇಂಗ್ಲೆಂಡ್ ಎದುರು ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಕಿವೀಸ್‌..!

ಈ ಪಂದ್ಯ ಮುಕ್ತಾಯದ ಬಳಿಕ ಮಾಧ್ಯಮದವರು, ಮುಂದೆಯೂ ನೀವು ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್, ನಾಯಕನಾಗಿ ಮುಂದುವರೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಉತ್ತಮ ಫಲಿತಾಂಶ ಪಡೆಯಲು ನಮ್ಮ ಆಟಗಾರರು ಚೆನ್ನಾಗಿಯೇ ಆಡಿದರು. ನಾನು ಇಂತಹ ಆಟಗಾರರನ್ನೊಳಗೊಂಡ ತಂಡದ ನಾಯಕರಾಗಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಮಾರ್ಗನ್ ಹೇಳಿದ್ದಾರೆ. 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

ಇಯಾನ್ ಮಾರ್ಗನ್‌ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ್ದರೂ ಸಹಾ, ಬ್ಯಾಟಿಂಗ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದಾರೆ. 2021ರಲ್ಲಿ ಇಯಾನ್ ಮಾರ್ಗನ್ ಕೇವಲ 16.66ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ಇಯಾನ್ ಮಾರ್ಗನ್ ಇಂಗ್ಲೆಂಡ್ ತಂಡದಲ್ಲಿ ಮುಂದುವರೆಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios