ಸೌಥಾಂಪ್ಟನ್(ಜು.10)‌: ವೆಸ್ಟ್‌ಇಂಡೀಸ್‌ ವೇಗದ ಬೌಲಿಂಗ್‌ ದಾಳಿಗೆ ತತ್ತ​ರಿ​ಸಿದ ಇಂಗ್ಲೆಂಡ್‌ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 204 ರನ್‌ಗಳ ಸಾಧಾ​ರಣ ಮೊತ್ತಕ್ಕೆ ಆಲೌಟ್‌ ಆಗಿದೆ. ನಾಯಕನ ಆಟ ಪ್ರದರ್ಶಿಸಿದ ಜೇಸನ್‌ ಹೋಲ್ಡರ್‌ 6 ವಿಕೆಟ್‌ ಕಬಳಿ​ಸಿ​ದರೆ, ಶ್ಯಾನನ್‌ ಗೇಬ್ರಿ​ಯಲ್‌ 4 ವಿಕೆಟ್‌ ಕಿತ್ತರು. 

ಒಂದು ಹಂತದಲ್ಲಿ 87 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ನಾಯಕ ಬೆನ್‌ ಸ್ಟೋಕ್ಸ್‌ 43 ಹಾಗೂ ಉಪನಾಯಕ ಜೋಸ್ ಬಟ್ಲರ್35 ರನ್‌ ಗಳಿಸಿ ಇಂಗ್ಲೆಂಡ್‌ಗೆ ಆಸರೆಯಾದರು. ಈ ಇಬ್ಬರು ಆಟಗಾರರನ್ನು ಪೆವಿಲಿಯನ್ನಿಗಟ್ಟುವಲ್ಲಿ ವಿಂಡೀಸ್ ನಾಯಕ ಹೋಲ್ಡರ್ ಯಶಸ್ವಿಯಾದರು. ಕೊನೆಯಲ್ಲಿ ಡಾಮ್ ಬೆಸ್(31) ಹಾಗೂ ಜೇಮ್ಸ್ ಆಂಡರ್‌ಸನ್(10) ಅಮೂಲ್ಯ ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ನೆರವಾದರು.

2021ರ ಜೂನ್‌ವರೆಗೂ ಏಷ್ಯಾ​ಕಪ್‌ ಮುಂದೂ​ಡಿ​ಕೆ..! ಐಪಿಎಲ್ ಆಯೋಜನೆಗೆ ಮರುಜೀವ

ಇಂಗ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ವಿಂಡೀಸ್ ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭವನ್ನೇ ಪಡೆಯಿತು. ಚಹಾ ವಿರಾ​ಮದ ಬಳಿಕ ಮೊದಲ ಇನ್ನಿಂಗ್ಸ್‌ ಆರಂಭಿ​ಸಿದ ವಿಂಡೀಸ್‌ಗೆ ಕ್ರೇಗ್‌ ಬ್ರಾಥ್‌ವೇಟ್‌ ಹಾಗೂ ಜಾನ್‌ ಕ್ಯಾಂಬೆಲ್‌ ಉತ್ತಮ ಆರಂಭ ನೀಡಿ​ದರು. ಮೊದಲ ವಿಕೆಟ್‌ಗೆ ಈ ಜೋಡಿ 43 ರನ್‌ಗಳ ಜತೆಯಾಟ ನಿಭಾಯಿಸಿತು. ಈ ವೇಳೆ 28 ರನ್‌ಗಳಿಸಿದ್ದ ಜಾನ್‌ ಕ್ಯಾಂಬೆಲ್‌ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್‌ಗೆ ವಿಕೆಟ್ ಒಪ್ಪಿಸಿದರು. ಇದೀಗ ಶಾಯ್ ಹೋಪ್ ಹಾಗೂ ಕ್ರೇಗ್‌ ಬ್ರಾಥ್‌ವೇಟ್‌ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: ಇಂಗ್ಲೆಂಡ್‌ (ಮೊ​ದಲ ಇನ್ನಿಂಗ್ಸ್‌) 204/10 (ಸ್ಟೋಕ್ಸ್‌ 43, ಹೋಲ್ಡರ್‌ 6-42, ಗೇಬ್ರಿ​ಯಲ್‌ 4-62)