ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್‌ ಸಿಡಿಸಿದ ಆಟಗಾರರ ಟಾಪ್ 10 ಪಟ್ಟಿ ಸೇರಿದ ಟಿಮ್ ಸೌಥಿಟಿಮ್ ಸೌಥಿ ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ 6 ಸಿಕ್ಸರ್ ಸಿಡಿಸಿದ ಸೌಥಿ

ವೆಲ್ಲಿಂಗ್ಟ​ನ್‌(ಫೆ.27): ನ್ಯೂಜಿ​ಲೆಂಡ್‌ನ ಹಿರಿಯ ವೇಗಿ ಟಿಮ್‌ ಸೌಥಿ ಟೆಸ್ಟ್‌ ಕ್ರಿಕೆ​ಟ್‌​ನಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿ​ಸಿ ಅಗ್ರ 10 ಆಟಗಾರರ ಪಟ್ಟಿ​ಯಲ್ಲಿ ಸ್ಥಾನ ಗಿಟ್ಟಿ​ಸಿ​ಕೊಂಡಿ​ದ್ದಾರೆ. ಇಂಗ್ಲೆಂಡ್‌ ವಿರು​ದ್ಧದ 2ನೇ ಟೆಸ್ಟ್‌​ನ ಮೊದಲ ಇನ್ನಿಂಗ್‌್ಸ​ನಲ್ಲಿ 6 ಸಿಕ್ಸರ್‌ ಬಾರಿ​ಸಿದ ಸೌಥಿ ತಮ್ಮ ಒಟ್ಟಾರೆ ಸಿಕ್ಸ​ರ್‌ ಗಳಿ​ಕೆ​ಯ​ನ್ನು 82ಕ್ಕೆ ಏರಿ​ಸಿ​, ಮ್ಯಾಥ್ಯೂ ಹೇಡ​ನ್‌​(82), ಆ್ಯಂಡ್ರೂ ಫ್ಲಿಂಟಾ​ಫ್‌​(82)ಜೊತೆ ಜಂಟಿ 10ನೇ ಸ್ಥಾನ ಪಡೆದಿದ್ದಾರೆ. 

ಸೌಥಿ ಟೆಸ್ಟ್‌ನಲ್ಲಿ ಒಟ್ಟು 2,345 ಎಸೆತಗಳನ್ನು ಎದುರಿಸಿದ್ದು, ಉಳಿದ ಬ್ಯಾಟರ್‌ಗಳಿಗೆ ಹೋಲಿಸಿದರೆ ಬಹಳ ಕಡಿಮೆ ಎಸೆತಗಳಲ್ಲಿ ಈ ಸಾಧನೆ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಹೇಡನ್‌ 14,349 ಎಸೆತಗಳಲ್ಲಿ 82, ಫ್ಲಿಂಟಾಫ್‌ 6,197 ಎಸೆತಗಳಲ್ಲಿ 82 ಸಿಕ್ಸರ್‌ ಬಾರಿಸಿದ್ದಾರೆ. ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ 109 ಸಿಕ್ಸರ್‌ನೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸ್ಟೋಕ್ಸ್‌ ಒಟ್ಟು 9,593 ಎಸೆತ ಎದುರಿಸಿದ್ದಾರೆ.

ಧೋನಿ, ತೆಂಡುಲ್ಕರ್, ರೋಹಿತ್ ದಾಖಲೆ ಉಡೀಸ್: ಎರಡನೇ ಟೆಸ್ಟ್‌ ಪಂದ್ಯದಲ್ಲಿ 6 ಸಿಕ್ಸರ್ ಚಚ್ಚುವ ಮೂಲಕ ಟಿಮ್ ಸೌಥಿ, ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ(78), ಸಚಿನ್ ತೆಂಡುಲ್ಕರ್(69), ರೋಹಿತ್ ಶರ್ಮಾ(68), ಕಪಿಲ್ ದೇವ್(61) ಅವರ ದಾಖಲೆಯನ್ನು ಅಳಿಸಿ ಹಾಕಿದರು.

ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 103 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗಿಳಿದ ಟಿಮ್ ಸೌಥಿ ಕೇವಲ 49 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 73 ರನ್ ಸಿಡಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ನೆರವಾದರು.

ಫಾಲೋ ಆನ್‌ ಬಳಿಕ ದಿಟ್ಟ ಹೋರಾಟ ತೋರಿದ ನ್ಯೂಜಿಲೆಂಡ್‌

ವೆಲ್ಲಿಂಗ್ಟನ್‌: ಬಜ್‌ಬಾಲ್ ಆಟದ ಮೂಲಕ ಗಮನ ಸೆಳೆದಿರುವ ಇಂಗ್ಲೆಂಡ್‌ಗೆ ಇದೀಗ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ. ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ ನಷ್ಟಕ್ಕೆ 435 ರನ್ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತ್ತು. ಇದರ ಬೆನ್ನಲ್ಲೇ ಮೊದಲು ಬ್ಯಾಟಿಂಗ್ ಮಾಡಲಿಳಿದ ನ್ಯೂಜಿಲೆಂಡ್‌ ತಂಡವು ಕೇವಲ 209 ರನ್‌ಗಳಿಗೆ ಸರ್ವಪತನ ಕಂಡಿತು. ನಾಯಕ ಟಿಮ್ ಸೌಥಿ(73) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳಿಂದಲೂ ಕೆಚ್ಚೆದೆಯ ಹೋರಾಟ ಕಂಡು ಬರಲಿಲ್ಲ. ಪರಿಣಾಮ 226 ರನ್‌ಗಳ ಹಿನ್ನಡೆ ಅನುಭವಿಸಿದ್ದ ಕಿವೀಸ್‌ ತಂಡದ ಮೇಲೆ ಬೆನ್ ಸ್ಟೋಕ್ಸ್‌ ಪಡೆ ಫಾಲೋ ಆನ್‌ ಹೇರಿತು.

ಫಾಲೋ ಆನ್‌ನಲ್ಲಿ ಕಿವೀಸ್‌ ಕೆಚ್ಚೆದೆಯ ಹೋರಾಟ: ಮೊದಲ ಟೆಸ್ಟ್‌ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ನ್ಯೂಜಿಲೆಂಡ್ ತಂಡವು ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಸೋಲು ಅನುಭವಿಸಲಿದೇ ಎಂದೇ ಲೆಕ್ಕಹಾಕಲಾಗಿತ್ತು. ಆದರೆ ಮೊದಲ ವಿಕೆ​ಟ್‌ಗೆ ಲೇಥ​ಮ್‌​(83), ಕಾನ್‌​ವೇ​(61) ನಡುವೆ 49 ರನ್‌ ಜೊತೆ​ಯಾ​ಟ ಮೂಡಿಬಂತು. ಬಳಿಕ ಕೇವ​ಲ 18 ರನ್‌ ಅಂತ​ರ​ದಲ್ಲಿ 3 ವಿಕೆಟ್‌ ಉರು​ಳಿದವು. ಇದಾದ ಬಳಿಕ ನಾಯಕ ಕೇನ್ ವಿಲಿಯಮ್ಸನ್‌ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ಮೂರನೇ ದಿನದಾಟದಂತ್ಯದ ವೇಳೆಗೆ ನ್ಯೂಜಿಲೆಂಡ್ ತಂಡವು 3 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿತು.

Women's T20 World Cup: ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಚಾಂಪಿಯನ್‌..!

ಇನ್ನು ನಾಲ್ಕನೇ ದಿನವೂ ನ್ಯೂಜಿಲೆಂಡ್ ತಂಡವು ಎಚ್ಚರಿಕೆಯ ಆರಂಭವನ್ನೇ ಪಡೆದುಕೊಂಡಿದೆ. 4ನೇ ವಿಕೆಟ್‌ಗೆ ಕೇನ್‌ ವಿಲಿಯಮ್ಸನ್ ಹಾಗೂ ಹೆನ್ರಿ ನಿಕೋಲ್ಸ್‌ ಜೋಡಿ 173 ಎಸೆತಗಳನ್ನು ಎದುರಿಸಿ 55 ರನ್‌ಗಳನ್ನು ಕಲೆಹಾಕಿತು. ನಿಕೋಲ್ಸ್‌ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ 5ನೇ ವಿಕೆಟ್‌ಗೆ ಕೇನ್ ವಿಲಿಯಮ್ಸನ್‌ ಹಾಗೂ ಡೇರಲ್ ಮಿಚೆಲ್ ಜೋಡಿ 75 ರನ್‌ಗಳ ಜತೆಯಾಟವಾಡಿ ತಂಡಕ್ಕೆ ಆಸರೆಯಾಯಿತು. ಡೇರಲ್ ಮಿಚೆಲ್ 54 ರನ್ ಬಾರಿಸಿ ಸ್ಟುವರ್ಟ್‌ ಬ್ರಾಡ್‌ಗೆ ವಿಕೆಟ್‌ ಒಪ್ಪಿಸಿದರು.

ಕೇನ್‌ ವಿಲಿಯಮ್ಸನ್‌ ಆಕರ್ಷಕ ಶತಕ: ಉತ್ತಮ ಆರಂಭದ ಬಳಿಕ ಕ್ರೀಸ್‌ಗಿಳಿದ ಮಾಜಿ ನಾಯಕ ಕೇನ್ ವಿಲಿಯಮ್ಸನ್‌, ತಮ್ಮ ಖಾತೆಗೆ ಮತ್ತೊಂದು ಟೆಸ್ಟ್ ಶತಕ ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ. ಆರನೇ ವಿಕೆಟ್‌ಗೆ ಟಾಮ್ ಬ್ಲಂಡಲ್ ಹಾಗೂ ಕೇನ್ ವಿಲಿಯಮ್ಸನ್‌ 247 ಎಸೆತಗಳನ್ನು ಎದುರಿಸಿ 147 ರನ್‌ಗಳ ಜತೆಯಾಟವಾಡುವ ಮೂಲಕ ತಂಡವು 200+ ರನ್‌ಗಳ ಮುನ್ನಡೆ ಗಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಸದ್ಯ 148 ಓವರ್‌ಗಳ ಅಂತ್ಯದ ವೇಳೆಗೆ ನ್ಯೂಜಿಲೆಂಡ್ ತಂಡವು ಕೇವಲ 5 ವಿಕೆಟ್‌ ಕಳೆದುಕೊಂಡು 444 ರನ್ ಬಾರಿಸಿದ್ದು ಒಟ್ಟಾರೆ 219 ರನ್‌ಗಳ ಮುನ್ನಡೆ ಸಾಧಿಸಿದೆ.

ನೆಲಕಚ್ಚಿ ಆಡುತ್ತಿರುವ ಮಾಜಿ ನಾಯಕ ಕೇನ್ ವಿಲಿಯಮ್ಸನ್‌ 267 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ ಅಜೇಯ 125 ರನ್ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಬ್ಲಂಡೆಲ್‌ 134 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 71 ರನ್‌ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದಾರೆ.