ಪುಣೆ(ಮಾ.29): ವಿಶ್ವಕ್ರಿಕೆಟ್‌ನ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಇಲ್ಲಿನ ಎಂಸಿಎ ಮೈದಾನದಲ್ಲಿ ಏಕದಿನ ಸರಣಿಗಾಗಿ ಕಾದಾಡಿದವು. ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 7 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ಕೊನೆಯ ಕ್ಷಣದವರೆಗೆ ಕ್ರಿಕೆಟ್‌ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಭಾರತೀಯ ಆಟಗಾರರ ಸಂಘಟಿತ ಪ್ರದರ್ಶನದ ನೆರವಿನಿಂದು ರೋಚಕ ಜಯ ಸಾಧಿಸುವ ಮೂಲಕ ಹಾಲಿ ವಿಶ್ವಚಾಂಪಿಯನ್ನರಿಗೆ ಭಾರತ ತನ್ನ ತವರಿನಲ್ಲಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಕೆಲವು ತಮಾಷೆಯ ಘಟನೆಗಳಿಗೂ ಸಾಕ್ಷಿಯಾಯಿತು.

ಭಾರತ ನೀಡಿದ್ದ 330 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಆರಂಭದಲ್ಲೇ ಜೇಸನ್‌ ರಾಯ್ ಹಾಗೂ ಜಾನಿ ಬೇರ್‌ಸ್ಟೋವ್‌ ವಿಕೆಟ್‌ ಕಳೆದುಕೊಂಡಿತು. ಆದರೆ ಎರಡನೇ ಏಕದಿನ ಪಂದ್ಯದಲ್ಲಿ ಮೈಚಳಿ ಬಿಟ್ಟು ಬ್ಯಾಟ್‌ ಬೀಸಿದ್ದ ಬೆನ್‌ ಸ್ಟೋಕ್ಸ್‌ ವಿಕೆಟ್ ಕಬಳಿಸುವುದು ಭಾರತಕ್ಕೆ ಅನಿವಾರ್ಯವಾಗಿತ್ತು. ಈ ವೇಳೆ ಭುವನೇಶ್ವರ್ ಕುಮಾರ್‌ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಅದರೆ ಸುಲಭ ಕ್ಯಾಚನ್ನು ಹಾರ್ದಿಕ್‌ ಪಾಂಡ್ಯ ಕೈಚೆಲ್ಲಿದರು. ಇದು ಭಾರತಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಬಹುತೇಕ ಕ್ರಿಕೆಟ್‌ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ ಪಂದ್ಯದ 11ನೇ ಓವರ್‌ನಲ್ಲಿ ನಟರಾಜನ್‌ ಬೌಲಿಂಗ್‌ನಲ್ಲಿ ಬೆನ್‌ ಸ್ಟೋಕ್ಸ್‌ ಗಬ್ಬರ್‌ ಸಿಂಗ್‌ ಖ್ಯಾತಿಯ ಶಿಖರ್ ಧವನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. 

ಹಾರ್ದಿಕ್‌ ಪಾಂಡ್ಯ ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್‌: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಅನುಭವಿ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌, ಬೆನ್‌ ಸ್ಟೋಕ್ಸ್‌ ಕ್ಯಾಚ್‌ ಹಿಡಿಯುತ್ತಿದ್ದಂತೆಯೇ ಪಾಂಡ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಮಾತ್ರವಲ್ಲದೇ ಮೈದಾನದಲ್ಲಿ ಧವನ್‌ಗೆ ಕೈ ಮುಗಿದು ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ಈ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಅಗಿದೆ. ಇದರ ಬೆನ್ನಲ್ಲೆ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ ಮುಂಬೈ ಸ್ಟಾರ್ ಆಲ್ರೌಂಡರ್‌ ಹಾರ್ದಿಕ್ ಪಾಂಡ್ಯರನ್ನು ಟ್ರೋಲ್‌ ಮಾಡಿದ್ದು, ಡ್ರೀಮ್ ಇಲೆವನ್‌ ಜಾಹಿರಾತಿನ ದೃಶ್ಯದೊಂದಿಗೆ ಇದನ್ನೆಲ್ಲಾ ನಾನು ನೋಡಿಕೊಳ್ತೇನೆ, ನಿಮಗೆ ಸ್ವಾಗತ ಹಾರ್ದಿಕ್‌ ಪಾಂಡ್ಯ ಎಂದು ಟ್ವೀಟ್‌ ಮಾಡಿದೆ.