ಬೆಂಗಳೂರು(ಫೆ.26): 'ದಾವಣಗೆರೆ ಎಕ್ಸ್‌ಪ್ರೆಸ್‌' ಖ್ಯಾತಿಯ ಟೀಂ ಇಂಡಿಯಾ ಕ್ರಿಕೆಟಿಗ ವಿನಯ್‌ ಕುಮಾರ್‌ ಆರ್‌ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ 25 ವರ್ಷಗಳ ಸುದೀರ್ಘ ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

ಕರ್ನಾಟಕ ಮಾಜಿ ನಾಯಕ ವಿನಯ್‌ ಕುಮಾರ್‌ ಟ್ವೀಟ್‌ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದು, ತಮ್ಮ ವೃತ್ತಿಜೀವನದುದ್ದಕ್ಕೂ ಪ್ರೀತಿಸಿ, ಬೆಂಬಲಿಸಿ, ಹಾರೈಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಟ್ವೀಟ್‌ನಲ್ಲೇ ಪತ್ರವೊಂದನ್ನು ಲಗತ್ತಿಸಿದ್ದು, ತಮ್ಮ ವೃತ್ತಿಜೀವನವನ್ನು ಎಕ್ಸ್‌ಪ್ರೆಸ್‌ ಪಯಣಕ್ಕೆ ಹೋಲಿಸಿದ್ದು, ನಿವೃತ್ತಿ ಎನ್ನುವ ತಂಗುದಾಣಕ್ಕೆ ಬಂದು ತಲುಪಿರುವುದಾಗಿ ಬಣ್ಣಿಸಿದ್ದಾರೆ. 

ಕ್ರಿಕೆಟ್ ಕನಸಿನ ಜೀವನಕ್ಕೆ ತಣ್ಣೀರೆರದು ಪೋಷಿಸಿದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಹಾಗೂ ಭಾರತ ತಂಡ ಪ್ರತಿನಿಧಿಸಲು ಅವಕಾಶ ನೀಡಿದ ಬಿಸಿಸಿಐಗೆ ದಾವಣಗೆರೆ ಎಕ್ಸ್‌ಪ್ರೆಸ್‌ ಕೃತಜ್ಞತಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದೇ ವೇಳೆ ತಾವು ಪ್ರತಿನಿಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್‌, ಕೋಲ್ಕತ ನೈಟ್‌ ರೈಡರ್ಸ್, ಕೊಚ್ಚಿ ಟಸ್ಕರ್ಸ್‌ ಫ್ರಾಂಚೈಸಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಇನ್ನು ಇದೇ ವೇಳೆ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡುಲ್ಕರ್‌, ರಾಹುಲ್ ದ್ರಾವಿಡ್‌, ವಿರೇಂದ್ರ ಸೆಹ್ವಾಗ್‌, ರೋಹಿತ್ ಶರ್ಮಾ, ಸುರೇಶ್ ರೈನಾ ಹಾಗೂ ವಿರಾಟ್ ಕೊಹ್ಲಿಯಂತ ಅತ್ಯುತ್ತಮ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್‌ ಹಂಚಿಕೊಂಡಿದ್ದಕ್ಕೆ ಕೂಡಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಉಪುಲ್ ತರಂಗಾ..!

37 ವರ್ಷದ ವಿನಯ್ ಕುಮಾರ್ ಭಾರತ ಪರ 31 ಏಕದಿನ, 9 ಟಿ20 ಹಾಗೂ 1 ಟೆಸ್ಟ್ ಪಂದ್ಯವನ್ನಾಡಿದ್ದು, ಒಟ್ಟು 38 ವಿಕೆಟ್ ಕಬಳಿಸಿದ್ದಾರೆ. ಇನ್ನು ಐಪಿಎಲ್‌ನಲ್ಲಿ 105 ಪಂದ್ಯಗಳನ್ನಾಡಿ 28.25ರ ಸರಾಸರಿಯಲ್ಲಿ 105 ವಿಕೆಟ್ ಕಬಳಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 461 ಪಂದ್ಯಗಳನ್ನಾಡಿ 923 ವಿಕೆಟ್ ಕಬಳಿಸಿದ್ದಾರೆ.