Asianet Suvarna News Asianet Suvarna News

ಇಂಗ್ಲೆಂಡ್ ಎದುರು ಟಿ20 ಸರಣಿ ಸೋತ ಭಾರತ ಮಹಿಳಾ ಕ್ರಿಕೆಟ್ ತಂಡ..!

* ಇಂಗ್ಲೆಂಡ್ ಎದುರು ಟಿ20 ಸರಣಿ ಸೋತು ಹರ್ಮನ್‌ಪ್ರೀತ್ ಕೌರ್

* ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್ ತಂಡಕ್ಕೆ 2-1 ಅಂತರದಲ್ಲಿ ಜಯ

* ಭಾರತ ಮಹಿಳಾ ಕ್ರಿಕೆಟ್ ತಂಡದ ಇಂಗ್ಲೆಂಡ್ ಪ್ರವಾಸ ಅಂತ್ಯ

Danielle Wyatt powers England womens Cricket to eight wicket win England Clinch T20 Series kvn
Author
London, First Published Jul 15, 2021, 11:52 AM IST

ಲಂಡನ್‌(ಜು.15): ಡೇನಿಯಲ್‌ ವ್ಯಾಟ್‌ ಬಾರಿಸಿದ ಅಜೇಯ 89 ರನ್‌ಗಳ ನೆರವಿನಿಂದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡದೆದುರು ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್ ತಂಡವು 8 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ 2-1 ಅಂತರದಿಂದ ಕೈವಶ ಮಾಡಿಕೊಂಡಿದೆ.

ಭಾರತ ನೀಡಿದ್ದ 154 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಆರಂಭವದಲ್ಲೇ ಟಾಮಿ ಬಿಯುಮೌಟ್‌(11) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಎರಡನೇ ವಿಕೆಟ್‌ಗೆ ಜತೆಯಾದ ವ್ಯಾಟ್‌ ಹಾಗೂ ಸೀವರ್ 112 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಸೀವರ್ 36 ಎಸೆತಗಳಲ್ಲಿ 42 ರನ್‌ ಬಾರಿಸಿ ಸ್ನೆಹ್ ರಾಣಾಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ವ್ಯಾಟ್‌ 56 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ ಅಜೇಯ 89 ರನ್‌ ಚಚ್ಚಿದರು. ಇದರೊಂದಿಗೆ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳಿಂದ ತಂಡ ಜಯ ಸಾಧಿಸಿತು.

ಟಿ20 ಸರಣಿ ಮೇಲೆ ಭಾರತ ಮಹಿಳಾ ಕ್ರಿಕೆಟ್ ತಂಡದ ಕಣ್ಣು

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಆರಂಭಿಕ ವೈಫಲ್ಯ ಅನುಭವಿಸಿತು. ಶಫಾಲಿ ವರ್ಮಾ ಶೂನ್ಯ ಸುತ್ತಿದರೆ, ಹರ್ಲಿನ್‌ ಡಿಯೋಲ್ ಆಟ 6 ರನ್‌ಗಳಿಗೆ ಸೀಮಿತವಾಯಿತು. ಸ್ಮೃತಿ ಮಂಧನಾ 51 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 70 ರನ್‌ ಬಾರಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 36 ರನ್ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕುವಲ್ಲಿ ನೆರವಾದರು.

ಸರಣಿ ಗೆಲುವಿಲ್ಲದೇ ಭಾರತದ ಇಂಗ್ಲೆಂಡ್‌ ಪ್ರವಾಸ ಅಂತ್ಯ: ಇಂಗ್ಲೆಂಡ್ ಪ್ರವಾಸದಲ್ಲಿ ಮೊದಲಿಗೆ ಮಿಥಾಲಿ ರಾಜ್ ಪಡೆ ಇಂಗ್ಲೆಂಡ್ ಎದುರು ಏಕೈಕ ಟೆಸ್ಟ್ ಪಂದ್ಯವನ್ನಾಡಿತ್ತು. ಈ ಪಂದ್ಯವು ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. ಇದಾದ ಬಳಿಕ ನಡೆದ ಮೂರು ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್ ತಂಡವು 2-1 ಅಂತರದಲ್ಲಿ ಜಯಿಸಿತ್ತು. ಇದಾದ ಬಳಿಕ ಟಿ20 ಸರಣಿಯು ಇಂಗ್ಲೆಂಡ್ ಪಾಲಾಗಿದೆ.

Follow Us:
Download App:
  • android
  • ios