ಪ್ರಖ್ಯಾತ ಕ್ರಿಕೆಟ್ ಅಂಕಿಅಂಶ ತಜ್ಞ ಚೆನ್ನಗಿರಿ ಕೇಶವಮೂರ್ತಿ (೮೫) ನಿಧನರಾದರು. ಮಂಗಳವಾರ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದ ಅವರ ಅಂತ್ಯಕ್ರಿಯೆ ಇಂದು ಜಿಂಕೆ ಪಾರ್ಕ್‌ನಲ್ಲಿ ನೆರವೇರುತ್ತದೆ. ಕ್ರೀಡಾ ಪತ್ರಕರ್ತರಿಗೆ 'ನಡೆದಾಡುವ ಗ್ರಂಥಾಲಯ'ವಾಗಿದ್ದ ಅವರು, ದೇಶೀಯ ಕ್ರಿಕೆಟ್‌ನ ಅಪಾರ ಅಂಕಿಅಂಶಗಳನ್ನು ಸಂಗ್ರಹಿಸಿದ್ದರು. ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ್ದ ಅವರ 'ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು' ಕೃತಿ ಇತ್ತೀಚೆಗೆ ಬಿಡುಗಡೆಯಾಗಿತ್ತು.
ಬೆಂಗಳೂರು (ಮೇ.6): ಸರ್.. ಕರ್ನಾಟಕ ಕ್ರಿಕೆಟ್‌ನಲ್ಲಿ ಇಂಥದ್ದೊಂದು ಸಂಬಂಧಪಟ್ಟ ಅಂಕಿ-ಅಂಶ ಬೇಕು ಎಂದಾಗ ಥಟ್ಟನೆ ನೆನಪಾಗುತ್ತಿದ್ದ ಹೆಸರು ಪ್ರಖ್ಯಾತ ಅಂಕಿ-ಅಂಶ ತಜ್ಞ ಚೆನ್ನಗಿರಿ ಕೇಶವಮೂರ್ತಿ. ಕ್ರೀಡಾ ಪತ್ರಕರ್ತರ ಪಾಲಿಗೆ ನಡೆದಾಡುವ ಲೈಬ್ರೆರಿ ರೀತಿ ಇದ್ದ ಚೆನ್ನಗಿರಿ ಕೇಶವಮೂರ್ತಿ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು.
ವಯೋಸಹಜ ಸಮಸ್ಯೆಯಲ್ಲಿದ್ದ ಅವರು ಮಂಗಳವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಇಂದು ಸಂಜೆ 5.30ಕ್ಕೆ ಚಾಮರಾಜಪೇಟೆಯಲ್ಲಿ ಮೃತದೇಹದ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಗ ಸಂಜಯ್ ಚನ್ನಗಿರಿ, ಮಗಳು ಸವಿತಾ ಅವರನ್ನು ಚನ್ನಗಿರಿ ಕೇಶವಮೂರ್ತಿ ಅಗಲಿದ್ದಾರೆ.
ದೇಶೀಯ ಕ್ರಿಕೆಟ್‌ನ ಯಾವುದೇ ಪಂದ್ಯವಿದ್ದರೂ ಮೀಡಿಯಾ ಬಾಕ್ಸ್‌ನಲ್ಲಿ ಬಂದು ಕೂತಿರುತ್ತಿದ್ದ ಚೆನ್ನಗಿರಿ ಕೇಶವಮೂರ್ತಿ ಅವರು, ಕ್ರೀಡಾ ಪತ್ರಕರ್ತರು ಸರ್ ಇಂಥದ್ದೊಂದು ಅಂಕಿ-ಅಂಶ ಬೇಕಿತ್ತು ಎಂದರೆ ಸಾಕು ತಮ್ಮದೇ ಸ್ಟೈಲ್‌ನಲ್ಲಿ ಹುಡುಕಿ ಆ ಮಾಹಿತಿಯನ್ನು ನೀಡುತ್ತಿದ್ದರು. ತೀರಾ ಹಳೆಯ ಅಂಕಿ-ಅಂಶವಾಗಿದ್ದರೆ, ಸಂಜೆಯ ವೇಳೆಗೆ ಅದು ಅವರ ಮೊಬೈಲ್‌ಗೂ, ಈಮೇಲ್‌ಗೂ ಬಂದು ಬೀಳುತ್ತಿತ್ತು.
ದೇಶೀಯ ಆಟಗಾರ ಸಂಪೂರ್ಣ ಜಾಲವನ್ನೇ ನೀಡುವಷ್ಟು ಅಪಾರ ಅಂಕಿ ಅಂಶಗಳ ಸಂಪತ್ತು ಇವರ ಬಳಿ ಇದ್ದವು. ಚನ್ನಗಿರಿ ಕೇಶವಮೂರ್ತಿ ವೃತ್ತಿಯ ಜೊತೆ ಜೊತೆಗೆ ಕ್ರಿಕೆಟ್ ಹವ್ಯಾಸವನ್ನೂ ಬೆಳೆಸಿಕೊಂಡಿದ್ದ ಇವರು ಸಾಹಿತ್ಯದಿಂದಲೂ ಹೆಸರುವಾಸಿ.ಚನ್ನಗಿರಿ ಕೇಶವಮೂರ್ತಿ ಅವರ ಜೀವನ ಸಾಧನೆಯ 'ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು' ಎಂಬ ಪುಸ್ತಕ ಕಳೆದ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು. ಸ್ಪಿನ್ ಮಾಂತ್ರಿಕ ಹಾಗೂ ದಿಗ್ಗಜ ಕ್ರಿಕೆಟಿಗ ಬಿಎಸ್ ಚಂದ್ರಶೇಖರ್ ಅವರ ಸ್ವಗೃಹದಲ್ಲಿ ಪುಸ್ತಕ ಬಿಡುಗಡೆಯಾಗಿತ್ತು. ಕ್ರಿಕೆಟ್ ಅಂಕಿ-ಅಂಶ ಮಾತ್ರವಲ್ಲದೆ ಪತ್ತೇದಾರಿ ಕಾದಂಬರಿಗಳನ್ನೂ ಕೇಶವಮೂರ್ತಿ ಅವರು ಬರೆದಿದ್ದಾರೆ.


