ಸಿಡ್ನಿ(ನ.27): ಟೀಂ ಇಂಡಿಯಾ, ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಇವೆರಡನ್ನೂ ಕ್ರಿಕೆಟ್‌ ಆಟ ಮಿಸ್‌ ಮಾಡಿಕೊಳ್ಳುತಿತ್ತು. 9 ತಿಂಗಳ ಬಳಿಕ ಎರಡನ್ನೂ ಮತ್ತೆ ನೋಡಲು ಅವಕಾಶ ಸಿಗುತ್ತಿದೆ. ಶುಕ್ರವಾರದಿಂದ ಬಹು ನಿರೀಕ್ಷಿತ ಭಾರತ-ಆಸ್ಪ್ರೇಲಿಯಾ ಸರಣಿ ಆರಂಭಗೊಳ್ಳುತ್ತಿದ್ದು, ಇಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

ಸಿಡ್ನಿ ಕ್ರಿಕೆಟ್‌ ಮೈದಾನ (ಎಸ್‌ಸಿಜಿ)ದ ಒಟ್ಟು ಸಾಮರ್ಥ್ಯದ ಶೇ.50ರಷ್ಟು ಟಿಕೆಟ್‌ಗಳನ್ನು ಮಾರಾಟ ಮಾಡಲು ಸ್ಥಳೀಯ ಆಡಳಿತ ಅನುಮತಿ ನೀಡಿತ್ತು. ಕೆಲವೇ ಗಂಟೆಗಳಲ್ಲಿ ಟಿಕೆಟ್‌ಗಳು ಸೋಲ್ಡೌಟ್‌ ಆಗಿದ್ದವು.

2021, 2022ರ ಟಿ20 ವಿಶ್ವಕಪ್‌, 2023ರ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಈ ಸರಣಿಯ ಎರಡೂ ತಂಡಗಳಿಗೆ ಮುನ್ನುಡಿಯಂತಿರಲಿದೆ. ಇದೇ ವರ್ಷ ಆರಂಭದಲ್ಲಿ ಆಸ್ಪ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಾಗ ಭಾರತ 2-1ರಲ್ಲಿ ಏಕದಿನ ಸರಣಿ ಗೆದ್ದಿತ್ತು. ಬಳಿಕ ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ, 0-3ರಲ್ಲಿ ಏಕದಿನ ಸರಣಿಯನ್ನು ಕೈಚೆಲ್ಲಿತ್ತು. ಅದಾದ ಬಳಿಕ ಗುರುವಾರ ಮೊದಲ ಬಾರಿಗೆ ಮೈದಾನಕ್ಕಿಳಿಯಲಿದ್ದು, ಗೆಲುವಿನೊಂದಿಗೆ ತನ್ನ ಹೊಸ ಅಭಿಯಾನವನ್ನು ಆರಂಭಿಸುವ ಗುರಿ ಹೊಂದಿದೆ.

ತಂಡ ಹೇಗಿರಲಿದೆ?: ರೋಹಿತ್‌ ಶರ್ಮಾ ಹೊರಬಿದ್ದಿರುವ ಕಾರಣ, ಶಿಖರ್‌ ಧವನ್‌ ಜೊತೆ ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌ ಇನ್ನಿಂಗ್ಸ್‌ ಆರಂಭಿಸುವ ನಿರೀಕ್ಷೆ ಇದೆ. ಶುಭ್‌ಮನ್‌ ಗಿಲ್‌ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌ ಹಾಗೂ ಹಾರ್ದಿಕ್‌ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿದ್ದಾರೆ. ರಾಹುಲ್‌ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ಹೊರಲಿದ್ದು, ಪಾಂಡ್ಯ ಕೇವಲ ಬ್ಯಾಟ್ಸ್‌ಮನ್‌ ಆಗಷ್ಟೇ ಆಡಲಿದ್ದಾರೆ. ರವೀಂದ್ರ ಜಡೇಜಾ ಆಲ್ರೌಂಡರ್‌ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ. ಶಮಿ ಹಾಗೂ ಬುಮ್ರಾ ಇಬ್ಬರೂ ಕಣಕ್ಕಿಳಿದರೆ 3ನೇ ವೇಗಿ ಸ್ಥಾನಕ್ಕೆ ಶಾರ್ದೂಲ್‌ ಠಾಕೂರ್‌ ಹಾಗೂ ನವ್‌ದೀಪ್‌ ಸೈನಿ ನಡುವೆ ಪೈಪೋಟಿ ಏರ್ಪಡಲಿದೆ. ಯಜುವೇಂದ್ರ ಚಹಲ್‌ ಹಾಗೂ ಕುಲ್ದೀಪ್‌ ಯಾದವ್‌ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ.

ಇಲ್ಲಿದೆ ನೋಡಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಸಂಭಾವ್ಯ ತಂಡ..!

ಬಲಿಷ್ಠ ಆಸೀಸ್‌: ಮತ್ತೊಂದೆಡೆ ಆಸ್ಪ್ರೇಲಿಯಾ ತಂಡ ಸದೃಢವಾಗಿದೆ. ಕೆಲ ವಾರಗಳ ಹಿಂದಷ್ಟೇ ಆರ್‌ಸಿಬಿ ತಂಡದಲ್ಲಿ ಕೊಹ್ಲಿ ಜೊತೆ ಗೆಲುವಿಗೆ ರಣತಂತ್ರಗಳನ್ನು ರೂಪಿಸುತ್ತಿದ್ದ ಆರೋನ್‌ ಫಿಂಚ್‌ ಈಗ ಕೊಹ್ಲಿ ಎದುರಾಗಿ ತಂತ್ರಗಾರಿಕೆ ಮಾಡಲಿದ್ದಾರೆ. ವಾರ್ನರ್‌, ಸ್ಮಿತ್‌, ಸ್ಟೋಯ್ನಿಸ್‌, ಲಬುಶೇನ್‌, ಸ್ಟಾರ್ಕ್, ಕಮಿನ್ಸ್‌, ಹೇಜಲ್‌ವುಡ್‌, ಮ್ಯಾಕ್ಸ್‌ವೆಲ್‌, ಕ್ಯಾರಿ, ಜಂಪಾ ಹೀಗೆ ಘಟಾನುಘಟಿಗಳಿಂದ ಆಸೀಸ್‌ ತಂಡ ಕೂಡಿದೆ. ಉಭಯ ತಂಡಗಳ ನಡುವೆ ಭಾರೀ ಪೈಪೋಟಿ ನಿರೀಕ್ಷೆ ಮಾಡಬಹುದು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಧವನ್‌, ಮಯಾಂಕ್‌, ಕೊಹ್ಲಿ(ನಾಯಕ), ಶ್ರೇಯಸ್‌, ರಾಹುಲ್‌, ಹಾರ್ದಿಕ್‌, ಜಡೇಜಾ, ಶಮಿ, ಶಾರ್ದೂಲ್‌/ಸೈನಿ, ಚಹಲ್‌/ಕುಲ್ದೀಪ್‌, ಬೂಮ್ರಾ.

ಆಸ್ಪ್ರೇಲಿಯಾ: ವಾರ್ನರ್‌, ಫಿಂಚ್‌(ನಾಯಕ), ಸ್ಮಿತ್‌, ಲಬುಶೇನ್‌, ಸ್ಟೋಯ್ನಿಸ್‌, ಕೇರಿ, ಮ್ಯಾಕ್ಸ್‌ವೆಲ್‌, ಕಮಿನ್ಸ್‌, ಸ್ಟಾರ್ಕ್, ಜಂಪಾ, ಹೇಜಲ್‌ವುಡ್‌.

ಪಂದ್ಯ ಆರಂಭ: ಬೆಳಗ್ಗೆ 9.10ಕ್ಕೆ 
ನೇರ ಪ್ರಸಾರ: ಸೋನಿ ಸಿಕ್ಸ್‌