* ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ* ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ಮುಖಾಮುಖಿ* ಭಾರತಕ್ಕೆ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರಾಳಿ
ವೆಲ್ಲಿಂಗ್ಟನ್: 12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women's World Cup 2022) ಟೂರ್ನಿಗೆ ಶುಕ್ರವಾರ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಏಪ್ರಿಲ್ 3ರ ವರೆಗೂ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿದ್ದು, ಕ್ರೈಸ್ಟ್‌ಚಚ್‌ರ್, ಆಕ್ಲೆಂಡ್, ಡ್ಯುನೆಡಿನ್, ತೌರಂಗ, ಹ್ಯಾಮಿಲ್ಟನ್ ಹಾಗೂ ವೆಲ್ಲಿಂಗ್ಟನ್ ಕ್ರೀಡಾಂಗಣಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
ಆಸ್ಪ್ರೇಲಿಯಾ, ನ್ಯೂಜಿಲೆಂಡ್, ಬಾಂಗ್ಲಾದೇಶ, ಭಾರತ, ಇಂಗ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ಪಾಲ್ಗೊಳ್ಳಲಿವೆ. ರೌಂಡ್ ರಾಬಿನ್ ಮಾದರಿಯ ಟೂರ್ನಿಯಲ್ಲಿ ಪ್ರತಿ ತಂಡಗಳು ಪರಸ್ಪರ ಒಮ್ಮೆ ಎದುರಾಗಲಿದ್ದು, ಕಳೆದ ಬಾರಿ ರನ್ನರ್-ಅಪ್ ಭಾರತಕ್ಕೆ ಮೊದಲ ಪಂದ್ಯದಲ್ಲಿ ಮಾರ್ಚ್ 6ರಂದು ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ ಎದುರಾಗಲಿದೆ. ಅಗ್ರ 4 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿದ್ದು, ಏಪ್ರಿಲ್ 3ಕ್ಕೆ ಕ್ರೈಸ್ಟ್‌ಚರ್ಚ್‌ನಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ. 6 ಬಾರಿ ಚಾಂಪಿಯನ್ ಆಸ್ಪ್ರೇಲಿಯಾ ಟೂರ್ನಿಯ ಯಶಸ್ವಿ ತಂಡ ಎನಿಸಿಕೊಂಡಿದ್ದು, ಇಂಗ್ಲೆಂಡ್ 4, ನ್ಯೂಜಿಲೆಂಡ್ 1 ಬಾರಿ ಪ್ರಶಸ್ತಿ ಗೆದ್ದಿದೆ.
ಕಳೆದ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಆತಿಥ್ಯವನ್ನು ವಹಿಸಿತ್ತು. 2017ರಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಿಥಾಲಿ ರಾಜ್ (Mithali Raj) ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು (Indian Women's Cricket Team) ಫೈನಲ್ ಪ್ರವೇಶಿಸಿ ಟ್ರೋಫಿ ಗೆಲ್ಲುವ ನಿರೀಕ್ಷೆ ಮೂಡಿಸಿತ್ತು. ಆದರೆ ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಎದುರು 9 ರನ್‌ಗಳ ರೋಚಕ ಸೋಲು ಕಾಣುವ ಮೂಲಕ ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಭಾರತೀಯ ವನಿತೆಯರು ಕೈಚೆಲ್ಲಿದ್ದರು. ಭಾರತದ ಅನುಭವಿ ಆಟಗಾರ್ತಿಯರಾದ ಮಿಥಾಲಿ ರಾಜ್ ಹಾಗೂ ಜೂಲನ್ ಗೋಸ್ವಾಮಿ ಪಾಲಿಗೆ ಇದು ಕಡೆಯ ಏಕದಿನ ವಿಶ್ವಕಪ್ ಆಗಿರುವುದರಿಂದ ಟ್ರೋಫಿ ಗೆದ್ದು ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಲು ಎದುರು ನೋಡುತ್ತಿದ್ದಾರೆ.
ಚಾಂಪಿಯನ್ ಆಗುವ ತಂಡಕ್ಕೆ 10 ಕೋಟಿ ರು. ಬಹುಮಾನ
ಈ ಬಾರಿ ಚಾಂಪಿಯನ್ ಆಗುವ ತಂಡಕ್ಕೆ 1.32 ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 9.94 ಕೋಟಿ ರುಪಾಯಿ), ರನ್ನರ್ ಅಪ್ ತಂಡಕ್ಕೆ 4.51 ಕೋಟಿ ರುಪಾಯಿ ಬಹುಮಾನ ಸಿಗಲಿದೆ. ಕಳೆದ ಬಾರಿ ಚಾಂಪಿಯನ್ ಆದ ತಂಡಕ್ಕೆ 4.99 ಕೋಟಿ ರುಪಾಯಿ ಬಹುಮಾನ ಸಿಕ್ಕಿತ್ತು. ಈ ಬಾರಿ ಪ್ರಶಸ್ತಿ ಮೊತ್ತವನ್ನು ಐಸಿಸಿ ದುಪ್ಪಟ್ಟಾಗಿಸಿದೆ.
ICC Women's World Cup 2022: ಮಹಿಳಾ ವಿಶ್ವಕಪ್‌ನಲ್ಲಿ ಕೋವಿಡ್ ಪತ್ತೆಯಾದರೆ ತಲಾ 9 ಜನ ಆಡ್ಬಹುದು..!
ಟೂರ್ನಿಯ ಅಂಕಿ-ಅಂಶ
31 ಪಂದ್ಯ: ಟೂರ್ನಿಯಲ್ಲಿ ಫೈನಲ್ ಸೇರಿ ಒಟ್ಟು 31 ಪಂದ್ಯಗಳು ನಡೆಯಲಿವೆ.
08 ತಂಡಗಳು: ಪ್ರಶಸ್ತಿಗಾಗಿ ಒಟ್ಟು 8 ತಂಡಗಳು ಸೆಣಸಾಡಲಿವೆ.
3 ತಂಡಗಳು ಮಾತ್ರ ಚಾಂಪಿಯನ್: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ 11 ಆವೃತ್ತಿಗಳು ನಡೆದಿದ್ದು, ಈ ಪೈಕಿ ಕೇವಲ ಮೂರು ತಂಡಗಳು ಮಾತ್ರ ಚಾಂಪಿಯನ್ ಪಟ್ಟ ಅಲಂಕರಿಸಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿವೆ.
ಅಂಧ ಮಹಿಳಾ ಕ್ರಿಕೆಟ್: ಕರ್ನಾಟಕ್ಕೆ 2ನೇ ಜಯ
ಬೆಂಗಳೂರು: ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ಕರ್ನಾಟಕ ತಂಡ ಸತತ 2ನೇ ಗೆಲುವು ಸಾಧಿಸಿದೆ. ಬುಧವಾರ ಗುಜರಾತ್ ವಿರುದ್ಧ ರಾಜ್ಯ ತಂಡ 8 ವಿಕೆಟ್ ಜಯಗಳಿತು. ಮೊದಲು ಬ್ಯಾಟ್ ಮಾಡಿದ ಗುಜರಾತ್ ನಿಗದಿತ 15 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. ರಾಜ್ಯ ತಂಡ 14.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಗುರುವಾರ ರಾಜ್ಯ ತಂಡಕ್ಕೆ ಕೇರಳ ಎದುರಾಗಲಿದೆ.
