ಐಪಿಎಲ್ ನಡೆಯುತ್ತಾ? ಸಿಹಿ ಸುದ್ದಿ ನೀಡಿದ ಬಿಸಿಸಿಐ
ಐಪಿಎಲ್ ಯಾವಾಗ ಎಂದು ಚಾತಕ ಪಕ್ಷಿಯಂತೆ ಕಾದುಕುಳಿತ ಅಭಿಮಾನಿಗಳಿಗೆ ಬಿಸಿಸಿಐನಿಂದ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಏನದು ಸಿಹಿ ಸುದ್ದಿ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ನವದೆಹಲಿ(ಜೂ.05): ಬಹುನಿರೀಕ್ಷಿತ 13ನೇ ಐಪಿಎಲ್ ಟೂರ್ನಿ ನಡೆಯುತ್ತೋ ಇಲ್ಲವೋ ಎನ್ನುವ ವಿಚಾರದಲ್ಲಿ ಗೊಂದಲಗಳಿರುವಾಗಲೇ ಬಿಸಿಸಿಐ ಅಭಿಮಾನಿಗಳಿಗೊಂದು ಸಿಹಿ ಸುದ್ದಿಯನ್ನು ನೀಡಿದೆ.
ಹೌದು, 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ವಿದೇಶದಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ದುಮಾಲ್ ಗುರುವಾರ ಹೇಳಿದ್ದಾರೆ. ಐಪಿಎಲ್ ಆಯೋಜನೆಗೆ ಭಾರತವೇ ಮೊದಲ ಆದ್ಯತೆಯಾಗಿದೆ. ಒಂದೊಮ್ಮೆ ಇಲ್ಲಿ ಐಪಿಎಲ್ ನಡೆಸುವುದು ಅಸಾಧ್ಯವಾದರೆ, ಕೊನೆಯ ಆದ್ಯತೆ ಎಂಬಂತೆ ವಿದೇಶದಲ್ಲಿ ನಡೆಸುವ ಯೋಚನೆಯಿದೆ ಎಂದು ಅರುಣ್ ದುಮಾಲ್ ತಿಳಿಸಿದ್ದಾರೆ.
ವಿದೇಶದಲ್ಲಿ ಐಪಿಎಲ್ ಆಯೋಜನೆ ಬಿಸಿಸಿಐಗೆ ಹೊಸದೇನಲ್ಲ. 2009ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಇನ್ನು 2014ರಲ್ಲೂ ಲೋಕಸಭಾ ಚುನಾವಣೆ ನಡೆದಿದ್ದರಿಂದ ಟೂರ್ನಿಯ ಅರ್ಧ ಭಾಗವನ್ನು ಯುಎಇನಲ್ಲಿ ನಡೆಸಲಾಗಿತ್ತು.
ಅನ್‌ಲಾಕ್ 1 ಮಾರ್ಗಸೂಚಿಯಿಂದ ಬಿಸಿಸಿಐನಲ್ಲಿ ಹರ್ಷ: IPL ನಡೆಯಲಿದೆ ಈ ವರ್ಷ!
ಕೊರೋನಾ ವೈರಸ್‌ನಿಂದ ಯಾವ ದೇಶವೂ ಸೇಫ್ ಆಗಿಲ್ಲ. ಹೀಗಾಗಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಇಲ್ಲವೇ ದುಬೈಗೆ ಆಟಗಾರರನ್ನು ಕರೆದುಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಎಲ್ಲಾ ಕಡೆ ಪರಿಸ್ಥಿತಿ ಒಂದೇ ರೀತಿಯಿದೆ. ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಕೆಲವು ದೇಶಗಳು ನಿರ್ಬಂಧ ಹೇರಿರುವುದು ದೊಡ್ಡ ಸವಾಲು. ಶ್ರೀಲಂಕಾ ಟೂರ್ನಿಗೆ ಆತಿಥ್ಯ ವಹಿಸಲು ರೆಡಿಯಿದೆ, ಆದರೆ ಇತ್ತೀಚಿನ ದಿನಗಳಲ್ಲಿ ದ್ವೀಪ ರಾಷ್ಟ್ರದಲ್ಲೂ ಕೊರೋನಾ ಪ್ರಕರಣಗಳು ಹೆಚ್ಚುತ್ತಿದೆ ಎಂದು ಅರುಣ್ ದುಮಾಲ್ ಅಭಿಪ್ರಾಯಪಟ್ಟಿದ್ದಾರೆ.
ಟಿ20 ವಿಶ್ವಕಪ್ ನಡೆಸುವ ಬಗ್ಗೆ ಐಸಿಸಿ ಜೂ.10ಕ್ಕೆ ನಿರ್ಧರಿಸಲಿದೆ. ಐಸಿಸಿಯ ಈ ನಿರ್ಧಾರಕ್ಕೆ ಬಿಸಿಸಿಐ ಕಾಯುತ್ತಿದೆ. ಒಟ್ಟಿನಲ್ಲಿ ಐಪಿಎಲ್ ಹಣೆಬರಹ ಬಹುತೇಕ ಕೊರೋನಾ ನಿಯಂತ್ರಣವನ್ನು ಅವಲಂಭಿಸಿರುವುದಂತೂ ಸುಳ್ಳಲ್ಲ.