ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಅವಕಾಶ ಕೈಚೆಲ್ಲಿದ ಹರ್ಮನ್‌ಪ್ರೀತ್ ಕೌರ್ ಪಡೆಮಹಿಳಾ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋಲುಂಡ ಭಾರತ ತಂಡಭಾರತ ತಂಡದ ಬ್ಯಾಟಿಂಗ್ ಪ್ರದರ್ಶನಕ್ಕೆ ಕಿಡಿಕಾರಿದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್

ಬರ್ಮಿಂಗ್‌ಹ್ಯಾಮ್(ಆ.08): ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದ ಮಹಿಳಾ ಕ್ರಿಕೆಟ್‌ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್‌ ತಂಡವು 9 ರನ್‌ಗಳ ರೋಚಕ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಭಾರತ ಕ್ರಿಕೆಟ್ ತಂಡವು ಕೊನೆಯ ಕ್ಷಣದಲ್ಲಿ ಬ್ಯಾಟಿಂಗ್‌ನಲ್ಲಿ ಕೊಂಚ ಹಿನ್ನೆಡೆ ಅನುಭವಿಸುವ ಮೂಲಕ ಚಿನ್ನದ ಪದಕ ಗೆಲ್ಲುವ ಅವಕಾಶ ಕೈಚೆಲ್ಲಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಇದೊಂದು ಯಾವುದೇ ಕಾಮನ್‌ಸೆನ್ಸ್‌ ಇಲ್ಲದ ಅರ್ಥಹೀನ ಬ್ಯಾಟಿಂಗ್ ಎಂದು ಕಿಡಿಕಾರಿದ್ದಾರೆ. 

ಮೊದಲು ಬ್ಯಾಟ್‌ ಮಾಡಿ 161 ರನ್ ಗಳಿಸಿದ್ದ ಮೆಗ್‌ ಲ್ಯಾನಿಂಗ್ ನೇತೃತ್ವದ ಆಸ್ಟ್ರೇಲಿಯಾ ಮಹಿಳಾ ತಂಡವು, ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಆಕರ್ಷಕ ಅರ್ಧಶತಕದ ಹೊರತಾಗಿಯೂ ಭಾರತ ತಂಡವು ಕೊನೆಯಲ್ಲಿ ಕೇವಲ 31 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಳ್ಳುವ ಮೂಲಕ 9 ರನ್‌ಗಳ ಆಘಾತಕರಾರಿ ಸೋಲು ಕಂಡಿತು. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಫೈನಲ್‌ನಲ್ಲಿ ಸೋಲು ಅನುಭವಿಸುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಮೊಹಮ್ಮದ್ ಅಜರುದ್ದೀನ್, 'ಭಾರತ ತಂಡದಿಂದ ಇದೊಂದು ಯಾವುದೇ ಕಾಮನ್‌ಸೆನ್ಸ್‌ ಇಲ್ಲದ ಅರ್ಥಹೀನ ಬ್ಯಾಟಿಂಗ್. ಗೆಲ್ಲಬಹುದಾಗಿದ್ದ ಪಂದ್ಯವನ್ನು ಭಾರತ ಕೈಚೆಲ್ಲಿದೆ' ಎಂದು ಟ್ವೀಟ್ ಮಾಡಿದ್ದಾರೆ. 

Scroll to load tweet…

ಸವಾಲಿನ ಗುರಿ ಬೆನ್ನತ್ತಿದ ಭಾರತ ಕ್ರಿಕೆಟ್ ತಂಡವು ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಸಹಾ, ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಜೆಮಿಯಾ ರೋಡ್ರಿಗಸ್ ಆಕರ್ಷಕ ಜತೆಯಾಟವಾಡುವ ಮೂಲಕ ಭಾರತೀಯ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಮೂರನೇ ವಿಕೆಟ್‌ಗೆ ಈ ಜೋಡಿ 96 ರನ್‌ಗಳ ಜತೆಯಾಟ ನಿಭಾಯಿಸಿತು. ಆದರೆ ಜೆಮಿಯಾ ವಿಕೆಟ್ ಪತನದ ಬಳಿಕ ಭಾರತ ನಿರಂತರ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಜೆಮಿಯಾ 33 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಕೇವಲ 43 ಎಸೆತಗಳಲ್ಲಿ 65 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.

Scroll to load tweet…

CWG 2022: ಭಾರತದ ವಿರುದ್ಧ ಜಯ ದಾಖಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಆಸಿಸ್‌, ಬೆಳ್ಳಿಗೆ ತೃಪ್ತಿ ಪಟ್ಟ ಟೀಂ ಇಂಡಿಯಾ

ಆಸ್ಟ್ರೇಲಿಯಾ ಪರ ಆಶ್ಲೆ ಗಾರ್ಡ್ನರ್ ಒಂದೇ ಓವರ್‌ನಲ್ಲಿ ಪೂಜಾ ವಸ್ತ್ರಾಕರ್(1) ಹಾಗೂ ಹರ್ಮನ್‌ಪ್ರೀತ್‌ ಕೌರ್ ವಿಕೆಟ್ ಕಬಳಿಸಿ ಶಾಕ್‌ ನೀಡಿದರು. ಇದಾದ ಬಳಿಕ ಸ್ನೆಹ್ ರಾಣಾ, ರಾಧಾ ಯಾದವ್ ಹಾಗೂ ದೀಪ್ತಿ ಶರ್ಮಾ ಕೂಡಾ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಭಾರತ ಗೆಲ್ಲಲು 11 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್ ಜವಾಬ್ದಾರಿ ಹೊತ್ತ ಜೆಸ್‌ ಜಾನ್ಸನ್‌ ಕೇವಲ 2 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಆಸೀಸ್‌ಗೆ ರೋಚಕ ಗೆಲುವು ತಂದುಕೊಟ್ಟರು.