Commonwealth Games: ಶಫಾಲಿ, ಹರ್ಮನ್ ಅಬ್ಬರ, ಆಸೀಸ್‌ಗೆ ಸವಾಲಿನ ಗುರಿ ನೀಡಿದ ಭಾರತ
* ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಪಂದ್ಯದಲ್ಲೇ ಭಾರತ ಭರ್ಜರಿ ಬ್ಯಾಟಿಂಗ್
* ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ ಹರ್ಮನ್‌ಪ್ರೀತ್ ಕೌರ್
* ಮೊದಲ ಪಂದ್ಯ ಗೆಲ್ಲಲು ಆಸ್ಟ್ರೇಲಿಯಾಗೆ 155 ರನ್‌ಗಳ ಗುರಿ
ಬರ್ಮಿಂಗ್‌ಹ್ಯಾಮ್(ಜು.29): ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು 7 ವಿಕೆಟ್ ಕಳೆದುಕೊಂಡು 154 ರನ್ ಬಾರಿಸಿದ್ದು, ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಜೀವದಾನದ ಲಾಭ ಪಡೆದು ಬ್ಯಾಟಿಂಗ್ ನಡೆಸಿದ ಶಫಾಲಿ ವರ್ಮಾ ಆಕರ್ಷಕ 48 ರನ್ ಬಾರಿಸಿದರೇ, ನಾಯಕಿಯಾಟವನ್ನಾಡಿದ ಹರ್ಮನ್‌ಪ್ರೀತ್ ಕೌರ್ ಆಕರ್ಷಕ 52 ರನ್ ಚಚ್ಚಿದರು..
ಇಲ್ಲಿನ ಎಜ್‌ಬಾಸ್ಟನ್ ಮೈದಾನದಲ್ಲಿ ಟಾಸ್ ಗೆದ್ದ ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಚುರುಕಿನ ಬ್ಯಾಟಿಂಗ್ ನಡೆಸಿದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ 17 ಎಸೆತಗಳಲ್ಲಿ 5 ಬೌಂಡರಿ ಸಹಿತ 24 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಯಾಶ್ತಿಕಾ ಭಾಟಿಯಾ ಜತೆಗೂಡಿ ಶಫಾಲಿ ವರ್ಮಾ ಎರಡನೇ ವಿಕೆಟ್‌ಗೆ 43 ರನ್‌ಗಳ ಜತೆಯಾಟ ನಿಭಾಯಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಯಾಶ್ತಿಕಾ ಭಾಟಿಯಾ ಕೇವಲ 8 ರನ್ ಬಾರಿಸಿ ರನೌಟ್ ಆದರೆ ಶಫಾಲಿ ವರ್ಮಾ ಕೇವಲ 33 ಎಸೆತಗಳಲ್ಲಿ 9 ಬೌಂಡರಿ ಸಹಿತ 48 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಕೈಕೊಟ್ಟ ಮಧ್ಯಮ ಕ್ರಮಾಂಕ: ಶಫಾಲಿ ವರ್ಮಾ ವಿಕೆಟ್ ಒಪ್ಪಿಸುವ ಮುನ್ನ ಭಾರತ ತಂಡವು 11.3 ಓವರ್‌ಗಳಲ್ಲಿ 93 ರನ್ ಗಳಿಸಿತ್ತು. ಆದರೆ ಶಫಾಲಿ ವಿಕೆಟ್ ಪತನವಾಗುತ್ತಿದ್ದಂತೆಯೇ ದಿಢೀರ್ ಕುಸಿತ ಕಂಡಿತು. ಜೆಮಿಯಾ ರೋಡ್ರಿಗಸ್ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೇ, ದೀಪ್ತಿ ಶರ್ಮಾ 01 ಹಾಗೂ ಹರ್ಲೀನ್ ಡಿಯೋಲ್ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ನಾಯಕಿಯ ಆಟ ಪ್ರದರ್ಶಿಸಿದ ಹರ್ಮನ್‌ಪ್ರೀತ್ ಕೌರ್: ಭಾರತ ಮಹಿಳಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಹರ್ಮನ್‌ಪ್ರೀತ್ ಕೌರ್, ಮೊದಲ ಪಂದ್ಯದಲ್ಲೇ ಜವಾಬ್ದಾರಿಯುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದರು. ಆಸೀಸ್ ಬೌಲರ್‌ಗಳ ಎದುರು ಸವಾರಿ ಮಾಡಿದ ಹರ್ಮನ್‌ಪ್ರೀತ್ ಕೌರ್ ಕೇವಲ 34 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಆಕರ್ಷಕ 52 ರನ್ ಬಾರಿಸಿ ಮಿಂಚಿದರು.
ಜೋನೆಸನ್‌ಗೆ 4 ವಿಕೆಟ್: ಆಸ್ಟ್ರೇಲಿಯಾದ ಲೆಗ್‌ಸ್ಪಿನ್ನರ್ ಜೆಸ್ ಜೋನೆಸನ್, ಭಾರತದ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಮೆಘಾನ 2 ಹಾಗೂ ಡಾರ್ಲಿ ಬ್ರೌನ್ ಒಂದು ವಿಕೆಟ್ ಪಡೆದರು.