ಚೆನ್ನೈ(ಫೆ.06): ನಾಯಕ ಜೋ ರೂಟ್ ದ್ವಿಶತಕ, ಬೆನ್ ಸ್ಟೋಕ್ಸ್ ಹಾಫ್ ಸೆಂಚುರಿ ಸೇರಿದಂತೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಅಬ್ಬರ ಚೆನ್ನೈ ಟೆಸ್ಟ್‌ನ ಎರಡನೆ ದಿನವೂ ಮುಂದುವರಿಯಿತು. ಪರಿಣಾಮ 2ನೇ ದಿನದಾಟದ ಅಂತ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 555 ರನ್ ಸಿಡಿಸಿದೆ.

ಚೆನ್ನೈ ಟೆಸ್ಟ್; ರೂಟ್ ಡಬಲ್ ಸೆಂಚುರಿಗೆ ಹಲವು ದಾಖಲೆ ಉಡೀಸ್!

ಮೊದಲ ದಿನ ಸೆಂಚುರಿ ಸಿಡಿಸಿದ್ದ ನಾಯಕ ಜೋ ರೂಟ್ 2ನೇ ದಿನದಾಟದಲ್ಲಿ ಮತ್ತೆ ಅಬ್ಬರಿಸಿದರು. ಹೀಗಾಗಿ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಡಬಲ್ ಸೆಂಚುರಿ ದಾಖಲೆ ಬರೆದರು. ಜೋ ರೂಟ್ 218 ರನ್ ಸಿಡಿಸಿದರು. ಇತ್ತ ಬೆನ್ ಸ್ಟೋಕ್ಸ್ 84 ರನ್ ಕಾಣಿಕೆ ನೀಡಿದರು. ಒಲ್ಲಿ ಪೋಪ್ 34 ರನ್ ಸಿಡಿಸಿದರು.

ಆಂಗ್ಲರ ವಿಕೆಟ್ ಕಬಳಿಸಲು ಭಾರತೀಯ ಬೌಲರ್‌ಗಳು ಹರಸಾಹಸ ಪಡಬೇಕಾಯಿತು. ಜೋಸ್ ಬಟ್ಲರ್ 30 ರನ್ ಸಿಡಿಸಿದರು. ಡೋಮಿನಿಕ್ ಬೆಸ್ ದಿಟ್ಟ ಹೋರಾಟ ನೀಡಿ 28 ರನ್ ಗಳಿಸಿ ಅಜೇಯರಾಗಿ ಉಳಿದರು. ದಿನದಾಟದ ಅಂತ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 555 ರನ್ ಸಿಡಿಸಿದೆ. 

3ನೇ ದಿನದಾಟದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಲಿದೆ. ಈ ಮೂಲಕ ಮತ್ತಷ್ಟು ರನ್ ಕಲೆಹಾಕಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆ ಹಾಕಿ, ಟೀಂ ಇಂಡಿಯಾವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನಕ್ಕೆ ಇಂಗ್ಲೆಂಡ್ ಕೈಹಾಕಲಿದೆ.