ಭಾರತದ ಗೆಲುವಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಗಣ್ಯಾತಿಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಬೆಂಗಳೂರು (ಫೆ.24): ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಐದನೇ ಪಂದ್ಯದಲ್ಲಿ ಭಾರತ ತಂಡ, ಪಾಕಿಸ್ತಾನವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ಈ ಟೂರ್ನಿಯಲ್ಲಿ ಭಾರತದ ಅಜೇಯ ಓಟ ಮುಂದುವರೆದರೆ, ಪಾಕಿಸ್ತಾನದ ಸೋಲಿನ ಸರಣಿ ಮುಂದುವರೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ 42.3 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು. ತಮ್ಮ ಏಕದಿನ ವೃತ್ತಿಜೀವನದ 51 ನೇ ಶತಕವನ್ನು ದಾಖಲಿಸಿದ ವಿರಾಟ್ ಕೊಹ್ಲಿ 111 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗುಳಿದರು. ಅಲ್ಲದೇ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಟೀಂ ಇಂಡಿಯಾ ಗೆಲುವಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಭಾರತದ ಗೆಲುವಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಗಣ್ಯಾತಿಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಗೆಲುವಿನ ಓಟ ಮುಂದುವರೆಯಲಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಗೆಲುವಿಗೆ ಸಿಎಂ ಸಿದ್ದರಾಮಯ್ಯ ಅಭಿನಂದಲೆ ಸಲ್ಲಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾಕೂಟದಲ್ಲಿ ಪಾಕಿಸ್ತಾನ ವಿರುದ್ಧದ ಇಂದಿನ ಅಭೂತಪೂರ್ವ ಗೆಲುವನ್ನು ನೋಡಿ ಆನಂದಿಸಿದೆ. ಭಾರತದ ಲಯಬದ್ಧ ಬೌಲಿಂಗ್, ವಿರಾಟ್ ಕೊಹ್ಲಿಯ ಅಮೋಘ ಬ್ಯಾಟಿಂಗ್, ತಂಡದ ಸಂಘಟಿತ ಹೋರಾಟ ಪಾಕಿಸ್ತಾನವನ್ನು ಬಗ್ಗುಬಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜಯದ ನಗೆ ಬೀರಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ನಮ್ಮವರ ಈ ಗೆಲುವಿನ ಓಟ ಪಂದ್ಯಾವಳಿಯುದ್ದಕ್ಕೂ ಹೀಗೆಯೇ ಮುಂದುವರೆಯಲಿ, ಭಾರತ ಚಾಂಪಿಯನ್ ಆಗಿ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ ಅಂತ ಟ್ವೀಟ್ ಮಾಡಿದ್ದಾರೆ.
ಶಹಬ್ಬಾಶ್ ಹುಡುಗ್ರಾ!: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ ಟೀಂ ಇಂಡಿಯಾಗೆ ಹೃದಯಪೂರ್ವಕ ಅಭಿನಂದನೆಗಳು. ಇದು ಇಡೀ ದೇಶವೇ ಹೆಮ್ಮೆಪಡುವ ಗೆಲುವಾಗಿದೆ. ವಿರಾಟ್ ಕೊಹ್ಲಿ ಅವರ ಶತಕದಾಟ, ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ರೋಮಾಂಚಕ ಅನುಭವ ನೀಡಿತು. ಜೈಹೋ ಟೀಂ ಇಂಡಿಯಾ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ನಮ್ಮನ್ನು ಹೆಮ್ಮೆ ಪಡಿಸಿದ್ದಕ್ಕಾಗಿ ಧನ್ಯವಾದಗಳು: ಇಂದಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕ್ರಿಕೆಟ್ ತಂಡದ ನಿರ್ಣಾಯಕ ಗೆಲುವು ಶ್ಲಾಘನೀಯ. ರಾಷ್ಟ್ರದ ಪರವಾಗಿ ವಿರಾಟ್ ಕೊಹ್ಲಿ ಮತ್ತು ಕುಲದೀಪ್ ಯಾದವ್ ಅವರಿಗೆ ಕೃತಜ್ಞತೆಯ ಮಾತು. ಈ ಪ್ರತಿಷ್ಠಿತ ಪಂದ್ಯದಲ್ಲಿ ತಂಡವು ನೀಡಿದ ಪ್ರದರ್ಶನಕ್ಕೆ ಅಭಿನಂದನೆಗಳು. ನಮ್ಮನ್ನು ಹೆಮ್ಮೆ ಪಡಿಸಿದ್ದಕ್ಕಾಗಿ ಧನ್ಯವಾದಗಳು. ಭವಿಷ್ಯದ ಪ್ರಯತ್ನಗಳಿಗೆ ಶುಭವಾಗಲಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಟ್ವೀಟ್ ಮಾಡಿದ್ದಾರೆ.
