ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಭಾರತೀಯ ಅಂಪೈರ್ ನಿತಿನ್ ಮೆನನ್ ಮತ್ತು ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಮತ್ತು ಕ್ರಿಕೆಟ್ ನಿಂದ ಬಿಡುವು ಕಾರಣ ನೀಡಿದ್ದಾರೆ. ಮದನಗೋಪಾಲ್ ಕೂಡಾ ಟೂರ್ನಿಯಿಂದ ಹೊರಗುಳಿದಿದ್ದಾರೆ. ಫೆಬ್ರವರಿ 19 ರಿಂದ ಪಾಕಿಸ್ತಾನ ಮತ್ತು ದುಬೈನಲ್ಲಿ ಟೂರ್ನಿ ನಡೆಯಲಿದೆ.
ದುಬೈ: ಇದೇ ಫೆಬ್ರವರಿ 19ರಿಂದ ಪಾಕಿಸ್ತಾನ ಹಾಗೂ ದುಬೈ ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಂಪೈರ್ ನಿತಿನ್ ಮೆನನ್, ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಪಾಲ್ಗೊಳ್ಳಲು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಬುಧವಾರ ಚಾಂಪಿಯನ್ಸ್ ಟ್ರೋಫಿಗೆ ಐಸಿಸಿ 12 ಅಂಪೈರ್‌ಗಳು ಹಾಗೂ 3 ಮ್ಯಾಚ್ ರೆಫ್ರಿಗಳ ಹೆಸರು ಪ್ರಕಟಿಸಿತು. ಇದರಲ್ಲಿ ನಿತಿನ್ ಮೆನನ್, ಜಾವಗಲ್ ಶ್ರೀನಾಥ್ ಹೆಸರಿಲ್ಲ. ಟೂರ್ನಿಗೆ ಗೈರಾಗುವುದಕ್ಕೆ ನಿತಿನ್ 'ವೈಯಕ್ತಿಕ ಕಾರಣ' ನೀಡಿದರೆ, ಜಾವಗಲ್ ಶ್ರೀನಾಥ್ ಅವರು ನಿರಂತರ ಕ್ರಿಕೆಟ್‌ನಿಂದಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಬಿಡುವು' ಪಡೆದಿದ್ದಾಗಿ ತಿಳಿಸಿದ್ದಾರೆ. ಆದರೆ ಇವರಿಬ್ಬರೂ ಪಾಕ್‌ಗೆ ತೆರಳಲು ನಿರಾಕರಿಸಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಭಾರತದ ಮತ್ತೋರ್ವ ಅಂಪೈರ್ ಮದನಗೋಪಾಲ್ ಕೂಡಾ ಪಾಕ್‌ಗೆ ತೆರಳಲು ನಿರಾಕರಿಸಿ ಟೂರ್ನಿಗೆ ಗೈರಾಗಲಿದ್ದಾರೆ ಎಂದು ವರದಿಯಾಗಿದೆ.
ಟೂರ್ನಿಯಲ್ಲಿ ಅಂಪೈರ್‌ಗಳಾಗಿ ಕುಮಾರ್ ಧರ್ಮಸೇನ, ಕ್ರಿಸ್ ಗ್ಯಾಫನಿ, ರಿಚರ್ಡ್ ಇಲ್ಲಿಂಗ್ ವರ್ಥ್ ಸೇರಿ 12 ಮಂದಿ ಕಾರ್ಯನಿರ್ವಹಿಸಲಿ ದ್ದಾರೆ. ಡೇವಿಡ್ ಬೂನ್, ರಂಜನ್ ಮದುಗಲೆ, ಆ್ಯಂಡ್ರ ಪಿಕ್ರಾಫ್ಟ್ ರೆಫ್ರಿಗಳಾಗಿರಲಿದ್ದಾರೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಇದೇ ಫೆಬ್ರವರಿ 19ರಿಂದ ಮಾರ್ಚ್ 09ರ ವರೆಗೆ ನಡೆಯಲಿದೆ. ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದ್ದರೂ, ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಹಿಂದೇಟು ಹಾಕಿದ್ದರಿಂದಾಗಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಭಾರತ ತಂಡವು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ತಾನಾಡುವ ಪಂದ್ಯಗಳನ್ನಾಡಲಿದೆ. ಇನ್ನುಳಿದ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಲಿವೆ.
ಜಗತ್ತಿನ 8 ಬಲಿಷ್ಠ ಕ್ರಿಕೆಟ್ ತಂಡಗಳು ಮಿನಿ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಈ ಟೂರ್ನಿಗೆ ಪಾಕಿಸ್ತಾನದ ಮೂರು ಸ್ಟೇಡಿಯಂಗಳಾದ ಕರಾಚಿ, ಲಾಹೋರ್ ಹಾಗೂ ರಾವಲ್ಪಿಂಡಿ ಮತ್ತು ಯುಎಇನ ದುಬೈನಲ್ಲಿ ಪಂದ್ಯಾಟಗಳು ನಡೆಯಲಿವೆ.ಇನ್ನು ನಾಯಕರ ಫೋಟೋಶೂಟ್‌ಗಾಗಿ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ನಾಯಕರ ಅಲಭ್ಯತೆಯಿಂದಾಗಿ ಈ ಕಾರ್ಯಕ್ರಮ ಕೂಡಾ ರದ್ದಾಗಿತ್ತು. 7 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ವೇದಿಕೆ ಸಜ್ಜಾಗಿದ್ದು, ಭಾರತ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
