* ಮತ್ತೆ ಐಪಿಎಲ್ ಹೆಗಲೇರಿತಾ ಮ್ಯಾಚ್ ಫಿಕ್ಸಿಂಗ್ ಭೂತ* ಈಗಾಗಲೇ ಏಳು ಶಂಕಿತ ಆರೋಪಿಗಳ ಮೇಲೆ ಪ್ರಕರಣ ದಾಖಲು*  ಪಾಕಿಸ್ತಾನದಿಂದ ಮಾಹಿತಿ ಪಡೆದು ಬೆಟ್ಟಿಂಗ್‌ ನಡೆಸಲಾಗುತ್ತಿತ್ತು ಎನ್ನುವ ಆರೋಪ

ಮುಂಬೈ(ಮೇ.15): ಹಲವು ಬಾರಿ ಐಪಿಎಲ್‌ನಲ್ಲಿ ಸದ್ದು ಮಾಡಿದ್ದ ಬೆಟ್ಟಿಂಗ್‌ ಭೂತ (IPL Match Fixing) ಮತ್ತೊಮ್ಮೆ ಟೂರ್ನಿಯ ಬೆನ್ನು ಬಿದ್ದಿದೆ. ಶನಿವಾರ 2019ರ ಆವೃತ್ತಿಯ ಐಪಿಎಲ್‌ನ ಕೆಲ ಪಂದ್ಯಗಳ ಫಲಿತಾಂಶಗಳ ಮೇಲೆ ಪ್ರಭಾವ ಬೀರಿರುವ ಆರೋಪದ ಮೇಲೆ ಏಳು ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಸಿಬಿಐ) ಎಫ್‌ಐಆರ್‌ ದಾಖಲಿಸಿದ್ದು, ತನಿಖೆ ತೀವ್ರಗೊಳಿಸಿದೆ. ಪಾಕಿಸ್ತಾನದಿಂದ ಮಾಹಿತಿ ಪಡೆದು ಬೆಟ್ಟಿಂಗ್‌ ನಡೆಸಲಾಗುತ್ತಿತ್ತು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದು, ಮ್ಯಾಚ್‌ ಫಿಕ್ಸಿಂಗ್‌ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.

ಡೆಲ್ಲಿಯ ದಿಲೀಪ್‌ ಕುಮಾರ್‌, ಹೈದರಾಬಾದ್‌ನ ಗುರ್ರಂ ವಾಸು ಹಾಗೂ ಗುರ್ರಂ ಸತೀಶ್‌ ಸೇರಿದಂತೆ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ ಕೆಲ ಸರ್ಕಾರಿ ಅಧಿಕಾರಿಗಳೂ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಸಿಬಿಐಗೆ ಮಾಹಿತಿ ಸಿಕ್ಕಿದ್ದು, ಇದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಅವರು ಪಾಕಿಸ್ತಾನದ ಪಾಕ್‌ನ ವಖಾಸ್‌ ಮಲಿಕ್‌ ಎಂಬಾತನ ಜೊತೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗುತ್ತಿದೆ.

ಸಿಬಿಐ ಈಗಾಗಲೇ ಡೆಲ್ಲಿ, ಜೋಧ್‌ಪುರ, ಜೈಪುರ, ಹೈದರಾಬಾದ್‌ ಸೇರಿದಂತೆ ಕೆಲ ನಗರಗಳಲ್ಲಿ ಹುಡುಕಾಟ ನಡೆಸಿದ್ದು, ಇನ್ನೂ ಹಲವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸುವ ಸಾಧ್ಯತೆ ಇದೆ. ತನಿಖಾ ಅಧಿಕಾರಿಗಳ ಪ್ರಕಾರ 2013ರಿಂದಲೇ ಈ ಗುಂಪು ಬೆಟ್ಟಿಂಗ್‌ನಲ್ಲಿ ಸಕ್ರಿಯವಾಗಿದ್ದು, ಬೆಟ್ಟಿಂಗ್‌ನಲ್ಲಿ ತೊಡಗಲು ಜನರಿಗೆ ಆಮಿಷವೊಡ್ಡುತ್ತಿತ್ತು ಎಂದು ತಿಳಿದುಬಂದಿದೆ. ನಕಲಿ ದಾಖಲೆಗಳನ್ನು ನೀಡಿ ಅವರು ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದು, ಅದರ ಮೂಲಕವೇ ಸುಮಾರು 10 ಕೋಟಿ ರು. ನಷ್ಟುವ್ಯವಹಾರ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2013ರಲ್ಲಿ ಮೊದಲ ಬಾರಿ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಎಸ್‌.ಶ್ರೀಶಾಂತ್‌ ಸೇರಿದಂತೆ ಮೂವರು ಆಟಗಾರರು ನಿಷೇಧಕ್ಕೊಳಗಾಗಿದ್ದರು. ಬಳಿಕ 2015ರಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಚೆನ್ನೈ ತಂಡಕ್ಕೆ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಐಪಿಎಲ್‌ನಿಂದ ನಿಷೇಧ ಹೇರಲಾಗಿತ್ತು.

4 ಬಾರಿ 250+ ರನ್‌, 10+ ವಿಕೆಟ್‌: ರಸೆಲ್‌ ದಾಖಲೆ

ಪುಣೆ: ಕೋಲ್ಕತಾ ನೈಟ್‌ ರೈಡ​ರ್ಸ್‌ ತಾರಾ ಆಲ್ರೌಂಡರ್‌ ಆ್ಯಂಡ್ರೆ ರಸೆಲ್‌ 4 ಐಪಿಎಲ್‌ ಆವೃತ್ತಿಗಳಲ್ಲಿ 250ಕ್ಕೂ ಹೆಚ್ಚು ರನ್‌ ಗಳಿಸಿ, 10ಕ್ಕೂ ಹೆಚ್ಚು ವಿಕೆಟ್‌ ಕಿತ್ತ ಮೊದಲ ಆಟಗಾರ ಎನಿಸಿಕೊಂಡರು. ಈ ಆವೃತ್ತಿಯಲ್ಲಿ 13 ಪಂದ್ಯಗಳನ್ನಾಡಿರುವ ಅವರು 41.25ರ ಸರಾಸರಿಯಲ್ಲಿ ಒಟ್ಟು 330 ರನ್‌ ಕಲೆ ಹಾಕಿದ್ದು, 14 ವಿಕೆಟ್‌ಗಳನ್ನು ಪಡೆದಿದ್ದಾರೆ. 

IPL 2022 ಸನ್ ರೈಸರ್ಸ್ ತಂಡಕ್ಕೆ ಹೀನಾಯ ಸೋಲು

ಇದಕ್ಕೂ ಮೊದಲು ಅವರು 2015, 2018 ಹಾಗೂ 2019ರಲ್ಲಿ 250+ ರನ್‌ ಹಾಗೂ 10+ ವಿಕೆಟ್‌ ಸಾಧನೆ ಮಾಡಿದ್ದರು. ಜಾಕ್‌ ಕಾಲಿಸ್‌ 3 ಬಾರಿ (2010, 2012, 2013) ಈ ಸಾಧನೆ ಮಾಡಿದ್ದಾರೆ. ಇನ್ನು, ರಸೆಲ್‌ ಅವರು ಐಪಿಎಲ್‌ನಲ್ಲಿ ವೇಗದ 2,000 ರನ್‌ ಗಳಿಸಿದ ದಾಖಲೆ ಬರೆದಿದ್ದಾರೆ. ಅವರು 81 ಇನ್ನಿಂಗ್ಸ್‌ಗಳಲ್ಲಿ ಕೇವಲ 1120 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.