Asianet Suvarna News Asianet Suvarna News

ಒಂದೇ ಓವರ್‌ನಲ್ಲಿ ಸತತ 5 ವಿಕೆಟ್‌: ಬ್ರೆಜಿಲ್‌ ಮಹಿಳಾ ತಂಡ ದಾಖಲೆ

* ಕ್ರಿಕೆಟ್‌ ಇತಿಹಾಸದಲ್ಲೇ 5 ಎಸೆತಗಳಲ್ಲಿ 5 ವಿಕೆಟ್ ಪತನ

* ಬ್ರೆಜಿಲ್-ಕೆನಡಾ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಪಂದ್ಯ

* ಕೆನಡಾ ಎದುರು ಬ್ರೆಜಿಲ್‌ಗೆ ಒಂದು ರನ್ ಅಂತರದ ರೋಚಕ ಜಯ

Brazil Women Cricket Team Take 5 Wickets in Final Over to Defeat Canada Women by One Run kvn
Author
Bengaluru, First Published Oct 28, 2021, 9:41 AM IST

ಮೆಕ್ಸಿಕೋ(ಅ.28): ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೊನೆಯ 5 ಎಸೆತಗಳಲ್ಲಿ ಸತತವಾಗಿ 5 ವಿಕೆಟ್‌ ಕಳೆದುಕೊಂಡ ರೋಚಕ ಕ್ಷಣಕ್ಕೆ ಬ್ರೆಜಿಲ್‌ (Brazil Cricket) ಹಾಗೂ ಕೆನಡಾ ಮಹಿಳಾ ತಂಡಗಳ (Canada Women's Cricket) ನಡುವಿನ ಪಂದ್ಯ ಸಾಕ್ಷಿಯಾಯಿತು. 5 ವಿಕೆಟ್‌ಗಳ ಪತನದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಮಂಗಳವಾರ ನಡೆದ ಮಹಿಳಾ ಟಿ20 ವಿಶ್ವಕಪ್‌ನ (Women's T20 World Cup) ಅಮೆರಿಕಾ ಪ್ರದೇಶದ ಅರ್ಹತಾ ಸುತ್ತಿನ ಪಂದ್ಯದ ಕೊನೆಯ ಓವರ್‌ನಲ್ಲಿ ಬ್ರೆಜಿಲ್‌ ತಂಡ ಈ ಸಾಧನೆ ಮಾಡಿತು. ಟಿ20 ಪಂದ್ಯವನ್ನು ಕಾರಾಣಾಂತರಗಳಿಂದ 17 ಓವರ್‌ಗೆ ಮಿತಿಗೊಳಿಸಲಾಗಿತ್ತು. ಮೊದಲು ಬ್ಯಾಟ್‌ ಮಾಡಿದ ಬ್ರೆಜಿಲ್‌ 17 ಓವರಲ್ಲಿ 7 ವಿಕೆಟ್ ಕಳೆದುಕೊಂಡು 48 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಕೆನಡಾ ಆರಂಭದಲ್ಲೇ ಕೆಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಗೆ ತಂಡಕ್ಕೆ ಅಂತಿಮ ಓವರಲ್ಲಿ ಗೆಲ್ಲಲು ಕೇವಲ 3 ರನ್‌ ಬೇಕಿತ್ತು. 5 ವಿಕೆಟ್‌ ಕೈಯಲ್ಲಿತ್ತು. 

ಆದರೆ ಲೌರಾ ಕಾರ್ಡೊಸೊ ಎಸೆದ 17ನೇ ಓವರಿನ 2ನೇ ಎಸೆತದಲ್ಲಿ ಕೆನಡಾ ಬ್ಯಾಟರ್‌ ರನೌಟಾದರು. ಮುಂದಿನ 3 ಎಸೆತಗಳಲ್ಲಿ 3 ವಿಕೆಟ್‌ ಕಿತ್ತು ಕಾರ್ಡೊಸೊ ಹ್ಯಾಟ್ರಿಕ್‌ ಸಾಧನೆ ಮಾಡಿದರು. 5ನೇ ಎಸೆತದಲ್ಲಿ ಮತ್ತೊಂದು ರನೌಟ್‌ ಆಗುವ ಮೂಲಕ ಕೆನಡಾ 1 ರನ್‌ ಅಂತರದಲ್ಲಿ ಸೋಲನುಭವಿಸಿತು.

ಹೀಗಿತ್ತು ನೋಡಿ ಆ ಕ್ಷಣ:

ಬಿಗ್‌ ಬ್ಯಾಶ್‌ ಲೀಗ್: ಸ್ಮೃತಿ, ಜೆಮಿಮಾ ಅರ್ಧಶತಕ

ಲಾನ್ಸೆಸ್ಟನ್‌(ಆಸ್ಪ್ರೇಲಿಯಾ): ಭಾರತದ ತಾರಾ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗಸ್‌ (Jemimah Rodrigues) ಹಾಗೂ ಸ್ಮೃತಿ ಮಂಧನಾ (Smriti Mandhana) ಮಹಿಳಾ ಬಿಗ್‌ ಬ್ಯಾಶ್‌ ಟಿ20 ಲೀಗ್‌ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. 

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮೆಲ್ಬರ್ನ್‌ ರೆನೆಗೇಡ್ಸ್‌ ತಂಡ ಜೆಮಿಮಾ ಸಿಡಿಸಿದ 75(56 ಎಸೆತ) ರನ್‌ ನೆರವಿನಿಂದ 5 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಸಿಡ್ನಿ 8 ವಿಕೆಟ್‌ ನಷ್ಟಕ್ಕೆ 133 ರನ್‌ ಗಳಿಸಿ 9 ರನ್‌ಗಳ ಸೋಲುಂಡಿತು. ಸಿಡ್ನಿ ತಂಡದ ಪರ ಸ್ಮೃತಿ ಮಂಧನಾ 44 ಎಸೆತಗಳಲ್ಲಿ 66 ರನ್‌ ಹಾಗೂ ದೀಪ್ತಿ ಶರ್ಮಾ 10 ಎಸೆತದಲ್ಲಿ 23 ರನ್‌ ಬಾರಿಸಿದರೂ ಜಯದ ಗೆರೆ ದಾಟಿಸಲು ಆಗಲಿಲ್ಲ.

ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್‌: ಸಿಂಧು ಶುಭಾರಂಭ, ಸೈನಾ ಔಟ್‌

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು (PV Sindhu) 2ನೇ ಸುತ್ತು ಪ್ರವೇಶಿಸಿದರೆ, ಸೈನಾ ನೆಹ್ವಾಲ್‌ (Saina Nehwal) ಮೊದಲ ಸುತ್ತಲ್ಲೇ ಗಾಯಗೊಂಡು ಹೊರನಡೆದಿದ್ದಾರೆ. ಬುಧವಾರ ನಡೆದ ಮಹಿಳಾ ಸಿಂಗಲ್ಸ್‌ ಸ್ಪರ್ಧೆಯಲ್ಲಿ ಸಿಂಧು, ಡೆನ್ಮಾರ್ಕ್‌ನ ಜೂಲೀ ಡವಲ್‌ ವಿರುದ್ಧ 21-15, 21-18 ಅಂತರದಲ್ಲಿ ಗೆದ್ದರು. ಸೈನಾ ಜಪಾನ್‌ನ ತಕಹಶಿ ವಿರುದ್ಧ 11​-21, 2​-9 ಹಿನ್ನಡೆ ಬಳಿಕ ಸ್ಪರ್ಧೆಯಿಂದ ಹಿಂದೆ ಸರಿದರು.

ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯಾ ಸೇನ್‌ ಐರ್ಲೆಂಡ್‌ನ ನಾಟ್‌ ನುಯೆನ್‌ ವಿರುದ್ಧ ಗೆದ್ದರೆ, ಸೌರಭ್‌ ವರ್ಮಾ ಬ್ರೆಜಿಲ್‌ನ ಕೊಯೆಲೊ ವಿರುದ್ಧ ಗೆಲುವು ಸಾಧಿಸಿದರು. ಕಿದಂಬಿ ಶ್ರೀಕಾಂತ್‌ ಜಪಾನ್‌ನ ಕೆಂಟೊ ಮೊಮೊಟಗೆ ಶರಣಾದರೆ, ಪಿ.ಕಶ್ಯಪ್‌ ಫ್ರಾನ್ಸ್‌ನ ಲೆವೆರ್ಡೆಜ್‌ ವಿರುದ್ಧ ಹಾಗೂ ಪ್ರನ್ನೋಯ್‌ ತೈವಾನ್‌ನ ಚೌ ಟೀನ್‌ ಚೆನ್‌ ವಿರುದ್ಧ ಸೋತರು. ಪುರುಷರ ಡಬಲ್ಸ್‌ನಲ್ಲಿ ಅರ್ಜುನ್‌-ಧ್ರುವ್‌ ಕಪಿಲಾ, ಮಿಶ್ರ ಡಬಲ್ಸ್‌ನಲ್ಲಿ ರಂಕಿ ರೆಡ್ಡಿ-ಅಶ್ವಿನಿ ಪೊನ್ನಪ್ಪ ಜೋಡಿ ಗೆಲುವು ಸಾಧಿಸಿತು.

Follow Us:
Download App:
  • android
  • ios