Asianet Suvarna News Asianet Suvarna News

ಇಂದಿನಿಂದ ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್ ಕದನ..!

ಅನುಭವಿ ಹಾಗೂ ಯುವ ಪಡೆಗಳೊಂದಿಗೆ ಆಫ್ರಿಕಾಕ್ಕೆ ವಿಮಾನವೇರಿರುವ ಭಾರತಕ್ಕೆ ಈ ಬಾರಿಯೂ ಅಗ್ನಿಪರೀಕ್ಷೆ ಎದುರಾಗುವುದು ಖಚಿತ. ಕೊಹ್ಲಿ, ರೋಹಿತ್ ಸೇರಿದಂತೆ ಪ್ರಮುಖರು ತಂಡದಲ್ಲಿದ್ದು ಈ ಮೊದಲು ಸಾಧಿಸಲಾಗದ್ದನ್ನು ಈ ಬಾರಿ ಸಾಧಿಸಲು ಎದುರು ನೋಡುತ್ತಿದ್ದಾರೆ.

Boxing Day Test India vs South Africa 1st Test begins Today kvn
Author
First Published Dec 26, 2023, 1:08 PM IST

ಸೆಂಚೂರಿಯನ್(ಡಿ.26): ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಹೀಗೆ ಭಾರತ ಎಲ್ಲೆಲ್ಲಾ ಟೆಸ್ಟ್ ಸರಣಿ ಆಡಿದೆಯೋ ಅಲ್ಲೆಲ್ಲಾ ಆತಿಥೇಯರನ್ನೇ ಮಣ್ಣು ಮುಕ್ಕಿಸಿ ಸರಣಿ ಗೆದ್ದು ಪರಾಕ್ರಮ ಮೆರೆದಿದೆ. ಆದರೆ ಭಾರತ ಟೆಸ್‌ಟ್ ಸರಣಿ ಗೆಲ್ಲದ ಪ್ರಮುಖ ದೇಶವೆಂದರೆ ಅದು ದಕ್ಷಿಣ ಆಫ್ರಿಕಾ. 3 ದಶಕಗಳಿಂದಲೂ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಆಡುತ್ತಿದ್ದರೂ ಒಮ್ಮೆಯೂ ಸರಣಿ ಗೆದ್ದಿಲ್ಲ. ಅದನ್ನು ಈ ಬಾರಿಯಾದರೂ ಸಾಧಿಸಲು ಪಣ ತೊಟ್ಟಿದ್ದು, ಮಂಗಳವಾರದಿಂದ ಆತಿಥೇಯರ ವಿರುದ್ಧ 2 ಪಂದ್ಯಗಳ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಮೊದಲ ಪಂದ್ಯಕ್ಕೆ ಸೆಂಚೂರಿಯನ್ ಆತಿಥ್ಯ ವಹಿಸಲಿದೆ.

ಅನುಭವಿ ಹಾಗೂ ಯುವ ಪಡೆಗಳೊಂದಿಗೆ ಆಫ್ರಿಕಾಕ್ಕೆ ವಿಮಾನವೇರಿರುವ ಭಾರತಕ್ಕೆ ಈ ಬಾರಿಯೂ ಅಗ್ನಿಪರೀಕ್ಷೆ ಎದುರಾಗುವುದು ಖಚಿತ. ಕೊಹ್ಲಿ, ರೋಹಿತ್ ಸೇರಿದಂತೆ ಪ್ರಮುಖರು ತಂಡದಲ್ಲಿದ್ದು ಈ ಮೊದಲು ಸಾಧಿಸಲಾಗದ್ದನ್ನು ಈ ಬಾರಿ ಸಾಧಿಸಲು ಎದುರು ನೋಡುತ್ತಿದ್ದಾರೆ. ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್ ದ.ಆಫ್ರಿಕಾದ ಬೌನ್ಸಿ ಪಿಚ್‌ಗಳಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲಿದ್ದಾರೆ ಎಂಬ ಕುತೂಹಲವಿದೆ. ಶ್ರೇಯಸ್ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ವಿಕೆಟ್ ಕೀಪರ್ ಆಗಿ ಕೆ.ಎಲ್. ರಾಹುಲ್ ಕಣಕ್ಕಿಳಿಯುವುದು ಬಹುತೇಕ ಖಚಿತ. 5ನೇ ಬೌಲರ್ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಮತ್ತು ಆರ್.ಅಶ್ವಿನ್ ನಡುವೆ ಸ್ಪರ್ಧೆ ಏರ್ಪಡಬಹುದು. ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಶ್ವಿನ್‌ಗೆ ಜಾಗ ಸಿಗದೇ ಇರಬಹುದು. ಬುಮ್ರಾ, ಮೊಹಮದ್ ಸಿರಾಜ್ ಅವರನ್ನೊಳಗೊಂಡ ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಅನುಭವಿ ಮೊಹಮದ್ ಶಮಿ ಅನುಪಸ್ಥಿತಿ ಕಾರಣ ಆ ಜಾಗಕ್ಕೆ ಪ್ರಸಿದ್ಧ್ ಕೃಷ್ಣ ಅಥವಾ ಮುಕೇಶ್ ನಡುವೆ ಪೈಪೋಟಿ ಇದೆ.

ಆತ್ಮವಿಶ್ವಾಸದಲ್ಲಿ ಆಫ್ರಿಕಾ: ಇನ್ನೊಂದೆಡೆ ದ.ಆಫ್ರಿಕಾ ತವರಿನಲ್ಲಿ ಭಾರತ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದ್ದು, ಇದೇ ಹುಮ್ಮಸ್ಸಿನಲ್ಲಿ ಸರಣಿಗೆ ಕಾಲಿಡಲಿದೆ. ತನ್ನ ವೇಗಿಗಳ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿರುವ ಆಫ್ರಿಕಾ, ಬಲಿಷ್ಠ ಭಾರತೀಯ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ನಿರೀಕ್ಷೆಯಲ್ಲಿದೆ. ಎಲ್ಗರ್, ಮಾರ್ಕ್‌ರಮ್ ಇರುವ ಬ್ಯಾಟಿಂಗ್ ಬಳಗವೂ ದ.ಆಫ್ರಿಕಾದ ಪ್ಲಸ್ ಪಾಯಿಂಟ್.

ಈ ವರೆಗೆ ದ.ಆಫ್ರಿಕಾದಲ್ಲಿ ಭಾರತ ಗೆದ್ದಿರೋದು 4 ಟೆಸ್ಟ್‌: ಭಾರತ 1992ರಿಂದ ದ.ಆಫ್ರಿಕಾದಲ್ಲಿ ಈ ವರೆಗೆ 8 ಟೆಸ್ಟ್‌ ಸರಣಿ ಆಡಿದೆ. ಒಮ್ಮೆ ಕೂಡಾ ಗೆದ್ದಿಲ್ಲ. 7 ಬಾರಿ ಸರಣಿ ಸೋತಿರುವ ಭಾರತ, 2010-11ರಲ್ಲಿ ಸರಣಿ 1-1ರಲ್ಲಿ ಡ್ರಾಗೊಳಿಸಿತ್ತು. ಆದರೆ ತಂಡ ದ.ಆಫ್ರಿಕಾದಲ್ಲಿ ಒಟ್ಟು 4 ಪಂದ್ಯ ಗೆದ್ದಿದೆ. ಉಳಿದಂತೆ ಇತ್ತಂಡಗಳು ಈ ವರೆಗೆ 15 ಟೆಸ್ಟ್‌ ಸರಣಿ ಆಡಿದ್ದು, 8ರಲ್ಲಿ ಆಫ್ರಿಕಾ ಗೆದ್ದಿದ್ದರೆ, 4 ಸರಣಿ ಭಾರತದ ಕೈವಶವಾಗಿದೆ. 3 ಬಾರಿ ಸರಣಿ ಡ್ರಾಗೊಂಡಿವೆ.

ಇಂದು ಭಾರಿ ಮಳೆ ಸಂಭವ: ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸೆಂಚೂರಿಯನ್‌ನಲ್ಲಿ ಈ ವಾರ ಮಳೆಯಾಗಲಿದೆ. ಅದರಲ್ಲೂ ಪಂದ್ಯದ ಮೊದಲ ದಿನ ಅಂದರೆ ಮಂಗಳವಾರ ಭಾರೀ ಮಳೆ ಮುನ್ಸೂಚನೆ ಇದೆ. ಇದರಿಂದ ಪಂದ್ಯಕ್ಕೂ ಅಡ್ಡಿಯಾಗುವ ಸಾಧ್ಯತೆ ಹೆಚ್ಚು

ಸಂಭವನೀಯ ಆಟಗಾರರ ಪಟ್ಟಿ:

ಭಾರತ: ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ ಅರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್, ಏಯ್ಡನ್ ಮಾರ್ಕ್‌ರಮ್, ಜೊರ್ಜಿ, ತೆಂಬಾ ಬವುಮಾ(ನಾಯಕ), ಬೆಡಿಂಗ್‌ಹ್ಯಾಂ/ಕೀಗನ್, ವೆರೈನ್, ಮಾರ್ಕೊ ಯಾನ್ಸನ್, ಕೇಶವ್ ಮಹರಾಜ್, ಕೋಟ್ಜೀ, ಕಗಿಸೋ ರಬಾಡ, ಲುಂಗಿ ಎನ್‌ಗಿಡಿ.

ಪಂದ್ಯಆರಂಭ: ಮಧ್ಯಾಹ್ನ 1.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್ 
 

Follow Us:
Download App:
  • android
  • ios