ಮೆಲ್ಬರ್ನ್‌(ಡಿ.29): ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯ ಬಾಕ್ಸಿಂಗ್ ಬಾಲ್ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ 200 ರನ್‌ಗಳಿಗೆ ಸರ್ವಪತನ ಕಂಡಿದ್ದು, ಭಾರತಕ್ಕೆ ಗೆಲ್ಲಲು 70 ರನ್‌ಗಳ ಸಾಧಾರಣ ಗುರಿ ನೀಡಿದೆ.

ಮೂರನೇ ದಿನದಾಟದಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ ಕಳೆದುಕೊಂಡು ಕೇವಲ133 ರನ್ ಬಾರಿಸಿದ್ದ ಆತಿಥೇಯ ಆಸ್ಟ್ರೇಲಿಯಾ ನಾಲ್ಕನೇ ದಿನವೂ ಸಾಕಷ್ಟು ಎಚ್ಚರಿಕೆಯ ಆಟಕ್ಕೆ ಮೊರೆ ಹೋಯಿತು. 7ನೇ ವಿಕೆಟ್‌ಗೆ ಕ್ಯಾಮರೋನ್ ಗ್ರೀನ್‌ ಹಾಗೂ ಪ್ಯಾಟ್ ಕಮಿನ್ಸ್‌ ಜೋಡಿ 213 ಎಸೆತಗಳನ್ನು ಎದುರಿಸಿ 57 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಮುನ್ನಡೆ ದಕ್ಕಿಸಿಕೊಡುವಲ್ಲಿ ಯಶಸ್ವಿಯಾದರು. ಕಮಿನ್ಸ್‌ 103 ಎಸೆತಗಳನ್ನು ಎದುರಿಸಿ 1 ಬೌಂಡರಿ ನೆರವಿನಿಂದ 22 ರನ್ ಬಾರಿಸಿ ಬುಮ್ರಾಗೆ ವಿಕೆಟ್‌ ಒಪ್ಪಿಸಿದರು. 

ಮತ್ತೊಂದೆಡೆ ಯುವ ಆಲ್ರೌಂಡರ್ ಕ್ಯಾಮರೋನ್ ಗ್ರೀನ್‌ ನೆಲಕಚ್ಚಿ ಆಡುವ ಮೂಲಕ ಭಾರತೀಯ ಬೌಲರ್‌ಗಳನ್ನು ಕಾಡಿದರು.146 ಎಸೆತಗಳನ್ನು ಎದುರಿಸಿದ 5 ಬೌಂಡರಿ ನೆರವಿನಿಂದ 45 ರನ್‌ ಬಾರಿಸಿ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ಮಿಚೆಲ್ ಸ್ಟಾರ್ಕ್(14) ಹಾಗೂ ಜೋಸ್ ಹೇಜಲ್‌ವುಡ್(10) ಕೆಲಕಾಲ ಪ್ರತಿರೋಧ ತೋರುವ ಮೂಲಕ ಆಸ್ಟ್ರೇಲಿಯಾದ ತಂಡದ ಮೊತ್ತ ಇನ್ನೂರರ ಗಡಿ ತಲುಪಿಸಿದರು.

ಬಾಕ್ಸಿಂಗ್ ಡೇ ಟೆಸ್ಟ್; 3ನೇ ದಿನ ಭಾರತದ ಬಿಗಿ ಹಿಡಿತ, ಸಂಕಷ್ಟದಲ್ಲಿ ಆಸೀಸ್ ಪಡೆ!

ಭಾರತ ಪರ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಮೊಹಮ್ಮದ್ ಸಿರಾಜ್‌ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ ಪಡೆದರೆ, ಅಶ್ವಿನ್‌, ಬುಮ್ರಾ ಹಾಗೂ ಜಡೇಜಾ ತಲಾ 2  ವಿಕೆಟ್‌ ಪಡೆದರು. ಇನ್ನು ಉಮೇಶ್ ಯಾದವ್ ಒಂದು ವಿಕೆಟ್‌ ಪಡೆದರು.