ರಾಹುಲ್-ಯಶಸ್ವಿ ಶತಕದ ಜತೆಯಾಟ; ಪರ್ತ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಕಮ್‌ಬ್ಯಾಕ್!
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟದಲ್ಲಿ ಆಸೀಸ್‌ಗೆ ಟೀಂ ಇಂಡಿಯಾ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.
ಪರ್ತ್: ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಕೆ ಎಲ್ ರಾಹುಲ್ ಅವರ ಮರಿಯದ ಶತಕದ ಜತೆಯಾಟದ ನೆರವಿನಿಂದ ಟೀಂ ಇಂಡಿಯಾ, ಪರ್ತ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭರ್ಜರಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 150 ರನ್‌ಗಳಿಗೆ ಸರ್ವಪತನ ಕಂಡಿದ್ದ ಭಾರತ, ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ ಎರಡನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 172 ರನ್ ಗಳಿಸಿದ್ದು, ಒಟ್ಟಾರೆ 218 ರನ್‌ಗಳ ಬೃಹತ್ ಮುನ್ನಡೆ ಪಡೆದಿದೆ. ಯಶಸ್ವಿ ಜೈಸ್ವಾಲ್ ಅಜೇಯ 90 ಬಾರಿಸಿದರೆ, ಮತ್ತೊಂದು ತುದಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಅಜೇಯ 62 ರನ್ ಸಿಡಿಸಿದ್ದಾರೆ.
ಇಲ್ಲಿನ ಪರ್ತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 104 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ಎರಡನೇ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿತು. ಇದಾದ ಬಳಿಕ ಪಿಚ್‌ಗೆ ಹೊಂದಿಕೊಂಡ ಯಶಸ್ವಿ ಜೈಸ್ವಾಲ್ ಹಾಗೂ ಕೆ ಎಲ್ ರಾಹುಲ್ ನಿಧಾನವಾಗಿ ರನ್ ಗಳಿಸಲು ಶುರು ಮಾಡಿದರು. ಮೊದಲ ದಿನದ ಪಿಚ್‌ಗೆ ಹೋಲಿಸಿದರೆ, ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡಲು ಬ್ಯಾಟರ್‌ಗಳಿಗೆ ಕಷ್ಟವಾಗಲಿಲ್ಲ. ಪ್ಯಾಟ್ ಕಮಿನ್ಸ್ ನೇತೃತ್ವದ ಆಸೀಸ್ ಏಳು ಬೌಲರ್‌ಗಳನ್ನು ಕಣಕ್ಕಿಳಿಸಿದರೂ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಬುಮ್ರಾ ಬೆಂಕಿ ದಾಳಿಗೆ ಕಾಂಗರೂ ಧೂಳೀಪಟ; ಪರ್ತ್ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ
ರಾಹುಲ್-ಯಶಸ್ವಿ ಜುಗಲ್ಬಂದಿ: ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಯಶಸ್ವಿ ಜೈಸ್ವಾಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು. ಯಶಸ್ವಿಗೆ ಕನ್ನಡಿಗ ಕೆ ಎಲ್ ರಾಹುಲ್ ಉತ್ತಮ ಸಾಥ್ ನೀಡಿದರು. ಕಾಂಗರೂ ಪಡೆಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ ಎರಡನೇ ದಿನದಾಟದಂತ್ಯಕ್ಕೆ 57 ಓವರ್‌ಗಳನ್ನು ಎದುರಿಸಿ ಮುರಿಯದ 172 ರನ್‌ಗಳ ಜತೆಯಾಟವಾಡಿತು. ಯಶಸ್ವಿ ಜೈಸ್ವಾಲ್ 193 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 90 ರನ್ ಸಿಡಿಸಿದ್ದಾರೆ. ಇನ್ನು ಮತ್ತೊಂದು ತುದಿಯಲ್ಲಿ ಕೆ ಎಲ್ ರಾಹುಲ್ 153 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ ಅಜೇಯ 62 ರನ್ ಬಾರಿಸಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇನ್ನು ಇದಕ್ಕೂ ಮೊದಲು 67 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಕೇವಲ 104 ರನ್‌ಗಳಿಗೆ ಸರ್ವಪತನ ಕಂಡಿತು. ಮಿಚೆಲ್ ಸ್ಟಾರ್ಕ್ 26 ರನ್ ಗಳಿಸಿದ್ದೇ ಆಸೀಸ್ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು. ಭಾರತ ಪರ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಪಡೆದರೆ, ಹರ್ಷಿತ್ ರಾಣಾ 3 ಹಾಗೂ ಮೊಹಮ್ಮದ್ ಸಿರಾಜ್ 2 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.