ಅಹಮದಾಬಾದ್‌ನಲ್ಲಿ ಇಂದಿನಿಂದ ಆಸ್ಟ್ರೇಲಿಯಾ ವಿರುದ್ದ 4ನೇ ಟೆಸ್ಟ್ ಆರಂಭಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ ರೋಹಿತ್ ಶರ್ಮಾ ಪಡೆಟೀಂ ಇಂಡಿಯಾದಲ್ಲಿ ಎರಡು ಪ್ರಮುಖ ಬದಲಾವಣೆಯಾಗುವ ಸಾಧ್ಯತೆ
ಅಹಮದಾಬಾದ್(ಮಾ.09): ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾಗೂ ತವರಿನಲ್ಲಿ ಸತತ 16ನೇ ಸರಣಿ ಗೆಲುವಿನ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ ಗುರುವಾರದಿಂದ ಆರಂಭವಾಗಲಿರುವ ಆಸ್ಪ್ರೇಲಿಯಾ ವಿರುದ್ಧದ 4ನೇ ಹಾಗೂ ಕೊನೆ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸರಣಿಯಲ್ಲಿ ರೋಹಿತ್ ಬಳಗ 2-1ರಿಂದ ಮುನ್ನಡೆಯಲ್ಲಿದ್ದರೂ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಯಾರನ್ನೂ ಅವಲಂಬಿಸದೆ ಟೆಸ್ಟ್ ವಿಶ್ವಕಪ್ ಫೈನಲ್ಗೇರಲು ಸಾಧ್ಯ. ಅತ್ತ ಆಸೀಸ್ ಇಂದೋರ್ ಟೆಸ್ಟ್ ಜಯದೊಂದಿಗೆ ವಿಶ್ವಕಪ್ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿದ್ದು, ಮತ್ತೊಂದು ಗೆಲುವಿನೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸಲು ಕಾಯುತ್ತಿದೆ.
ಈ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಮತ್ತೊಮ್ಮೆ ಸ್ಪಿನ್ನರ್ಗಳ ಪರಾಕ್ರಮಕ್ಕೆ ಸಾಕ್ಷಿಯಾಗುವ ಸಾಧ್ಯತೆ ಹೆಚ್ಚು. ಮೊದಲೆರಡು ಪಂದ್ಯದ ಹೀನಾಯ ಪ್ರದರ್ಶನದ ಬಳಿಕ ಆಸೀಸ್ 3ನೇ ಟೆಸ್ಟ್ನಲ್ಲಿ ಸ್ಪಿನ್ ಮೂಲಕವೇ ಭಾರತಕ್ಕೆ ಅನಿರೀಕ್ಷಿತ ತಿರುಗೇಟು ನೀಡಿತ್ತು. ಹೀಗಾಗಿ ಈ ಪಂದ್ಯ ಕುತೂಹಲ ಹೆಚ್ಚಿಸಿದೆ.
ಭಾರತ ಸರಣಿಯಲ್ಲಿ ಈವರೆಗೂ ತನ್ನ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ. ಕಳೆದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಬದಲು ಸ್ಥಾನ ಪಡೆದ ಶುಭ್‌ಮನ್ ಗಿಲ್ ನಿರೀಕ್ಷೆ ಹುಸಿಗೊಳಿಸಿದ್ದರು. ರೋಹಿತ್ ಶರ್ಮಾ ಮಿಂಚುತ್ತಿದ್ದರೂ, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ಶ್ರೇಯಸ್ ಅಯ್ಯರ್ ಸ್ಥಿರತೆ ಕಾಯ್ದುಕೊಳ್ಳಲು ವಿಫಲರಾಗುತ್ತಿದ್ದಾರೆ.
ಇಶಾನ್‌ಗೆ ಪಾದಾರ್ಪಣೆ ನಿರೀಕ್ಷೆ: ರಿಷಭ್ ಪಂತ್ ಬದಲು ತಂಡದಲ್ಲಿರುವ ಕೆ.ಎಸ್.ಭರತ್ ಕೀಪಿಂಗ್ನಲ್ಲಿ ಸುಧಾರಿತ ಪ್ರದರ್ಶನ ನೀಡುತ್ತಿದ್ದರೂ ಬ್ಯಾಟಿಂಗ್ನಲ್ಲಿ ವಿಫಲರಾಗುತ್ತಿದ್ದಾರೆ. 5 ಇನ್ನಿಂಗ್್ಸಗಳಲ್ಲಿ ಕೇವಲ 57 ರನ್ ಗಳಿಸಿದ್ದು, ಅವರ ಬದಲು ಯುವ ಬ್ಯಾಟರ್ ಇಶಾನ್ ಕಿಶನ್ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.
IPL ಇತಿಹಾಸದಲ್ಲಿ ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಟಾಪ್ 6 ಕ್ರಿಕೆಟಿಗರಿವರು..!
ಇನ್ನು ಆರ್.ಅಶ್ವಿನ್, ರವೀಂದ್ರ ಜಡೇಜಾ ಬೌಲಿಂಗ್ ಜೊತೆ ಬ್ಯಾಟಿಂಗ್ನಲ್ಲೂ ಮಿಂಚುತ್ತಿದ್ದು, ಅಕ್ಷರ್ ಪಟೇಲ್ 3 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆದರೂ ಬ್ಯಾಟಿಂಗ್ನಲ್ಲಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ 4ನೇ ಟೆಸ್ಟ್ನಲ್ಲೂ ಇವರ ಸ್ಥಾನ ಭದ್ರ. ಆದರೆ ವೇಗದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದ್ದು, ಮೊಹಮದ್ ಸಿರಾಜ್ ಬದಲು ಮೊಹಮದ್ ಶಮಿ ಆಡುವ ನಿರೀಕ್ಷೆಯಿದೆ. ಉಮೇಶ್ ಯಾದವ್‌ಗೂ ಸ್ಥಾನ ಸಿಗಬಹುದು.
ಮತ್ತೆ ಸ್ಮಿತ್ ಸಾರಥ್ಯ: ಕಳೆದ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಆಸೀಸ್ ತಂಡವನ್ನು ಮುನ್ನಡೆಸಿದ್ದ ಸ್ಟೀವ್ ಸ್ಮಿತ್ ಈ ಪಂದ್ಯಕ್ಕೂ ನಾಯಕತ್ವ ವಹಿಸಲಿದ್ದಾರೆ. ಖವಾಜ, ಲಬುಶೇನ್, ಹ್ಯಾಂಡ್‌್ಸಕಂಬ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಮಿಚೆಲ್ ಸ್ಟಾರ್ಕ್ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದು, ನೇಥನ್ ಲಯನ್, ಮ್ಯಾಥ್ಯೂ ಕುಹ್ನೆಮಾನ್ ಜೊತೆ ಟಾಡ್ ಮರ್ಫಿ ತಮ್ಮ ಸ್ಪಿನ್ ಅಸ್ತ್ರದ ಮೂಲಕ ಭಾರತವನ್ನು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸಲು ಕಾಯುತ್ತಿದ್ದಾರೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಇಶಾನ್ ಇಶಾನ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮದ್ ಶಮಿ, ಉಮೇಶ್ ಯಾದವ್.
ಆಸ್ಪ್ರೇಲಿಯಾ: ಉಸ್ಮಾನ್ ಖವಾಜ, ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್(ನಾಯಕ), ಪೀಟರ್ ಹ್ಯಾಂಡ್ಸ್‌ಕಂಬ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕೇರ್ರಿ, ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಟೋಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮಾನ್
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಚ್
ಈ ಪಂದ್ಯಕ್ಕೆ ಬಳಕೆಯಾಗಲಿರುವ ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ಮೊದಲ ದಿನವೇ ಅಲ್ಲದಿದ್ದರೂ ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳೇ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಹೆಚ್ಚು. ಇಲ್ಲಿ ನಡೆದ ಕೊನೆ 2 ಪಂದ್ಯಗಳು ಕ್ರಮವಾಗಿ 2 ಮತ್ತು 3 ದಿನಗಳಲ್ಲಿ ಕೊನೆಗೊಂಡಿದ್ದವು. ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಬಹುದು.
ಮೋದಿಯಿಂದ ಟಾಸ್?
ಭಾರತ-ಆಸ್ಪ್ರೇಲಿಯಾ ಪಂದ್ಯವನ್ನು ಗುರುವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಪ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಕ್ರೀಡಾಂಗಣದಲ್ಲಿ ಕೂತು ವೀಕ್ಷಿಸಲಿದ್ದಾರೆ. ತಮ್ಮದೇ ಹೆಸರಿನಲ್ಲಿರುವ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿ ಮೋದಿ ಅವರು ನೇರವಾಗಿ ಕ್ರಿಕೆಟ್ ಪಂದ್ಯ ವೀಕ್ಷಿಸಲಿದ್ದಾರೆ. ಅವರೇ ಪಂದ್ಯಕ್ಕೂ ಮುನ್ನ ಟಾಸ್ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.
