ಸೌರವ್ ಗಂಗೂಲಿಗೆ ಯಶಸ್ವಿ ಶಸ್ತ್ರಚಿಕಿತ್ಸೆ, ಮತ್ತೆರಡು ಸ್ಟೆಂಟ್ ಅಳವಡಿಕೆ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಎರಡನೇ ಬಾರಿಗೆ ಯಶಸ್ವಿಯಾಗಿ ಆ್ಯಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ದಾದಾ ಆರೋಗ್ಯ ಸ್ಥಿರವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕೋಲ್ಕತಾ(ಜ.29): ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ಆ್ಯಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಅವರ ಹೃದಯದಲ್ಲಿ 2 ಸ್ಟೆಂಟ್ ಅಳವಡಿಕೆ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಭಾರತ ತಂಡದ ಮಾಜಿ ನಾಯಕನ ಹೃದಯದಲ್ಲಿದ್ದ ಬ್ಲಾಕೇಜ್‌ಗಳನ್ನು ತೆಗೆಯಲಾಗಿದೆ. ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿ ತಿಳಿಸಿದ್ದಾರೆ. ಎದೆ ನೋವು ಕಾಣಿಸಿಕೊಂಡ ಕಾರಣ ಬುಧವಾರ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದರು. 3 ವಾರಗಳ ಹಿಂದೆ ಗಂಗೂಲಿ ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು. ಆಗ ಒಂದು ಸ್ಟೆಂಟ್ ಅಳವಡಿಕೆ ಮಾಡಲಾಗಿತ್ತು. ಇದೀಗ ದಾದಾ ಹೃದಯಕ್ಕೆ ಮತ್ತೆರೆಡು ಸ್ಟೆಂಟ್ ಅಳವಡಿಸಲಾಗಿದೆ.
ಸೌರವ್ ಗಂಗೂಲಿಗೆ ಇಂದು ಮತ್ತೆ ಹೃದಯ ಶಸ್ತ್ರಚಿಕಿತ್ಸೆ..!
ಎರಡನೇ ಬಾರಿಗೆ ಸೌರವ್ ಗಂಗೂಲಿಗೆ ಸ್ಟಂಟ್ ಅಳವಡಿಸುವ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹಾ ಆಸ್ಪತ್ರೆಯಲ್ಲಿ ಹಾಜರಿದ್ದರು. ಬಳಿಕ ಮಾತನಾಡಿದ ಮಮತಾ, ಸೌರವ್ ಗಂಗೂಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, 2 ಹೊಸ ಸ್ಟೆಂಟ್ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. ಸೌರವ್ ಎಚ್ಚರವಾಗಿದ್ದಾರೆ ಹಾಗೂ ಮಾತನಾಡುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಸೌರವ್ ಹಾಗೂ ಪತ್ನಿ ಡೋನಾ ಜತೆ ಮಾತನಾಡಿದೆ. ಹಾಗೂ ಇದೇ ಸಂದರ್ಭದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ ಎಂದು ದೀದಿ ಹೇಳಿದ್ದಾರೆ.
ಸೌರವ್ ಗಂಗೂಲಿಗೆ ಕಳೆದ ಎರಡು ದಿನಗಳ ಹಿಂದಷ್ಟೇ ಮತ್ತೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಕೋಲ್ಕತದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ, ಬುಧವಾರ ಸಂಜೆ ಆಸ್ಪತ್ರೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಪ್ರಕಾರ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಲಾಗಿತ್ತು.