ಅಹಮದಾಬಾದ್(ಡಿ.24)‌: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಬಿಸಿಸಿಐ ಗುರುವಾರ (ಡಿ.24) ಇಲ್ಲಿ ವಾರ್ಷಿಕ ಸಾಮಾನ್ಯ ಸಭೆ ನಡೆಸಲಿದೆ. ಸಭೆಯಲ್ಲಿ ಮುಂಬರುವ ಕ್ರಿಕೆಟ್‌ ಟೂರ್ನಿ, 2021ರಲ್ಲಿ ನಡೆಯಲಿರುವ ಮಹತ್ವದ ಟೂರ್ನಿಗಳು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ 10 ತಂಡಗಳು ಆಡುವ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.

ತೀವ್ರ ಕುತೂಹಲ ಮೂಡಿಸಿರುವ ಟಿ20 ವಿಶ್ವಕಪ್‌ನ ದಿನಾಂಕ ಹಾಗೂ ಸ್ಥಳದ ವಿವರವನ್ನು ಬಿಸಿಸಿಐ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನಲಾಗಿದೆ. ಸಭೆಯಲ್ಲಿ ಭಾರತ ಆತಿಥ್ಯ ವಹಿಸಿರುವ 2021ರ ಟಿ20 ವಿಶ್ವಕಪ್‌ ತೆರಿಗೆ ವಿನಾಯಿತಿ, ಐಪಿಎಲ್‌ ತಂಡಗಳ ಸೇರ್ಪಡೆಗೆ ಇರುವ ಸ್ಥಿತಿಗತಿ ಹಾಗೂ ದೇಶೀಯ ಕ್ರಿಕೆಟ್‌ ಟೂರ್ನಿಗಳ ಆಯೋಜನೆ ಸೇರಿದಂತೆ ಇತರೆ ಮಹತ್ವದ ವಿಷಯಗಳ ಚರ್ಚೆ ನಡೆಸುವ ಸಾಧ್ಯತೆಯಿದೆ.

ಕೋಟ್ಲಾದಲ್ಲಿ ಜೇಟ್ಲಿ ಪ್ರತಿಮೆ; DDCA ವಿರುದ್ಧ ಕಿಡಿಕಾರಿದ ಬಿಷನ್ ಸಿಂಗ್ ಬೇಡಿ

2020ರ ಸೆಪ್ಟೆಂಬರ್‌-ಅಕ್ಟೋಬರ್‌ ವೇಳೆಗೆ ಆಸ್ಪ್ರೇಲಿಯಾದಲ್ಲಿ ಈ ಟಿ20 ವಿಶ್ವಕಪ್‌ ನಡೆಯಬೇಕಿತ್ತು. ಆದರೆ ಕೊರೋನಾ ಕಾರಣದಿಂದ 1 ವರ್ಷ ಮುಂದೂಡಿಕೆಯಾದ ಕಾರಣ, ಐಸಿಸಿ ಈ ಟೂರ್ನಿಯನ್ನು ಭಾರತದಲ್ಲಿ ನಡೆಸಲು ನಿರ್ಧರಿಸಿದೆ.

ಸಭೆಯಲ್ಲಿ ಹೈದ್ರಾಬಾದ್‌ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ, ಮಾಜಿ ನಾಯಕ ಮೊಹಮದ್‌ ಅಜರುದ್ದೀನ್‌, ಮಾಜಿ ಆಟಗಾರ ಬ್ರಿಜೇಶ್‌ ಪಟೇಲ್‌, ಮಾಜಿ ಸೌರಾಷ್ಟ್ರ ತಂಡದ ನಾಯಕ ಜಯ್‌ದೇವ್‌ ಶಾ ಸೇರಿದಂತೆ ಇತರೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಗಂಗೂಲಿ, ಶಾ ಮಧ್ಯೆ ಸ್ನೇಹ ಸೌಹಾರ್ದ ಪಂದ್ಯ:

ಇಲ್ಲಿನ ಮೊಟೆರಾದ ಸರ್ದಾರ್‌ ಪಟೇಲ್‌ ಸ್ಟೇಡಿಯಂನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಕಾರ‍್ಯದರ್ಶಿ ಜಯ್‌ ಶಾ ಇಲೆವೆನ್‌ ತಂಡಗಳ ನಡುವೆ ಬುಧವಾರ ಸ್ನೇಹ ಸೌಹಾರ್ದಯುತ ಕ್ರಿಕೆಟ್‌ ಪಂದ್ಯವನ್ನು ನಡೆಸಲಾಯಿತು. ಪಂದ್ಯದಲ್ಲಿ ಬಿಸಿಸಿಐನ ಪದಾಧಿಕಾರಿಗಳು, ಮಾಜಿ ಕ್ರಿಕೆಟಿಗರು ಪಾಲ್ಗೊಂಡಿದ್ದರು. 1 ಲಕ್ಷದ 10 ಸಾವಿರ ಆಸನದ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದಲ್ಲಿ ಪಂದ್ಯವನ್ನು ನಡೆಸಿದ್ದು ವಿಶೇಷವಾಗಿತ್ತು.