ನವದೆಹಲಿ(ಜ.19): ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಜಯಿಸುತ್ತಿದ್ದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಟೀಂ ಇಂಡಿಯಾಗೆ 5 ಕೋಟಿ ರುಪಾಯಿ ಬಹುಮಾನ ಘೋಷಿಸಿದೆ. 

"

ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಗೆಲ್ಲಲು 328 ರನ್‌ಗಳ ಸವಾಲಿನ ಗುರಿ ನೀಡಿತ್ತು. ಅಲ್ಲದೇ ಗಾಬಾ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವು ಕಳೆದ 32 ವರ್ಷಗಳಿಂದಲೂ ಸೋಲಿನ ಕಹಿ ಉಂಡಿರಲಿಲ್ಲ. ಹೀಗಾಗಿ ಟೀಂ ಇಂಡಿಯಾ ಈ ಟೆಸ್ಟ್‌ ಪಂದ್ಯವನ್ನು ಗೆಲ್ಲುವುದು ಸುಲಭವಲ್ಲ ಎಂದೇ ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ ರಿಷಭ್‌ ಪಂತ್‌, ಶುಭ್‌ಮನ್‌ ಗಿಲ್‌ ಸ್ಫೋಟಕ ಆಟ ಹಾಗೂ ಚೇತೇಶ್ವರ್ ಪೂಜಾರ ತಾಳ್ಮೆಯ ಬ್ಯಾಟಿಂಗ್‌ ನೆರವಿನಿಂದ 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. 

ರಹಾನೆ ಪಡೆ ಈ ಸಾಧನೆ ಮಾಡುತ್ತಿದ್ದಂತೆ ಟ್ವೀಟ್‌ ಮಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಇದೊಂದು ಅತ್ಯದ್ಭುತ ಗೆಲುವು. ಆಸ್ಟ್ರೇಲಿಯಾಗೆ ಹೋಗಿ ಟೆಸ್ಟ್ ಸರಣಿ ಗೆಲ್ಲುವುದು ಅಂದರೆ ಅದು ಭಾರತದ ಕ್ರಿಕೆಟ್‌ ಇತಿಹಾಸದಲ್ಲಿ ಸದಾಕಾಲ ನೆನಪಿನಲ್ಲಿ ಉಳಿಯುವ ಕ್ಷಣ. ಹೀಗಾಗಿ ಭಾರತ ತಂಡಕ್ಕೆ ಬಿಸಿಸಿಐ 5 ಕೋಟಿ ರುಪಾಯಿ ಬೋನಸ್‌ ಘೋಷಿಸುತ್ತಿದೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿ ಗೆಲುವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆಸೀಸ್‌ ಪ್ರವಾಸದಲ್ಲಿರುವ ಎಲ್ಲರಿಗೂ ಅಭಿನಂದನೆಗಳು ಎಂದು ದಾದಾ ಟ್ವೀಟ್ ಮಾಡಿದ್ದಾರೆ.

ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾ ದಿಗ್ವಿಜಯ; ಬಾರ್ಡರ್‌-ಗವಾಸ್ಕರ್‌ ಸರಣಿ ಕೈವಶ

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳ ಪೈಕಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಜಯಿಸಿದ್ದವು. ಇನ್ನು ಸಿಡ್ನಿ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. ಬ್ರಿಸ್ಬೇನ್ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ.